ಕಾರ್ಕಳ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಉದ್ಘಾಟನೆ

ಕಾರ್ಕಳ, ಮೇ 25: ಕಾರ್ಕಳ ವಲಯ ಅರಣ್ಯ ಅಧಿಕಾರಿ ಪ್ರಾದೇಶಿಕ ವಲಯ ಕುದುರೆಮುಖ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೂತನ ಕಚೇರಿ ಕಟ್ಟಡವನ್ನು ರಾಜ್ಯ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಂದು ಉದ್ಘಾಟಿಸಿದರು.
ಬಳಿಕ ಕುದುರೆಮುಖ ವನ್ಯಜೀವಿ ವಿಭಾಗ ಕಚೇರಿಯ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಸಚಿವರು ಪುಷ್ಪನಮನ ಸಲ್ಲಿಸಿದರು. ಇದರೊಂದಿಗೆ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.
ಸುರಕ್ಷತಾ ಸಲಕರಣೆ ನೀಡಿ: ಅರಣ್ಯ ರಕ್ಷಣೆಯಲ್ಲಿ ಮುಂಚೂಣಿ ಸಿಬ್ಬಂದಿ ಗಳ ಪಾತ್ರ ಮಹತ್ವದ್ದಾಗಿದ್ದು, ಅವರ ಸುರಕ್ಷತೆಗಾಗಿ ವಿದ್ಯುತ್ ಪ್ರವಹಿಸುವ ಕೈಗೋಲು (ಸ್ಟಿಕ್), ಮಳೆಯಿಂದ ರಕ್ಷಿಸುವ ಜಾಕೆಟ್, ಶೂ ಇತ್ಯಾದಿ ನೀಡುವಂತೆ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಕಾರ್ಕಳದಲ್ಲಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಉದ್ಘಾಟಿಸಿದ ಬಳಿಕ ಅರಣ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಒದಗಿಸಲಾಗಿರುವ ಆಧುನಿಕ ಮತ್ತು ಹಗುರ ಬಂದೂಕುಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಂಚೂಣಿ ಸಿಬ್ಬಂದಿಯ ಸುರಕ್ಷತೆಗೂ ಗಮನ ಹರಿಸುವಂತೆ ತಿಳಿಸಿದರು.
ಆನೆ ಕಾರ್ಯಪಡೆ, ಕಳ್ಳಬೇಟೆ ನಿಗ್ರಹ ಪಡೆ, ಮುಂಚೂಣಿ ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನೀಡಲಾಗಿದೆಯೇ ಎಂದು ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಕಷ್ಟಪಟ್ಟು ಅಪಾಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅಪಾಯಭತ್ಯೆ (ರಿಸ್ಕ್ ಅಲೊಯನ್ಸ್) ನೀಡಲಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ತಿಳಿಸಿದರು.
ನಂತರ ಪ್ರವಾಸಿ ಮಂದಿರಕ್ಕೆ ತೆರಳಿದ ಸಚಿವರು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.
ಇದಕ್ಕೂ ಮುನ್ನ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ತೆರಳಿದ ಈಶ್ವರ ಖಂಡ್ರೆ ದೇವರ ದರ್ಶನ ಪಡೆದು, ರಾಜ್ಯದಲ್ಲಿ ಉತ್ತಮ, ಮಳೆ, ಬೆಳೆ, ಆಗಲಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್, ಕಮಲಾ ಕರಿಕಳನ್ ಸೇರಿದಂತೆ ಉಡುಪಿ, ಮಂಗಳೂರಿನ ಹಿರಿಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.






