ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಕನಸಿನ ಮೇಲೆ ದಾಳಿ: ಪ್ರೊ.ಫಣಿರಾಜ್

ಉಡುಪಿ, ಮೇ 25: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಕನಸುಗಳ ಮೇಲಿನ ದಾಳಿಯಾಗಿದೆ. ಈ ಹಗರಣಕ್ಕೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯೇ ನೇರ ಹೊಣೆಯಾಗಿದ್ದು ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆಗ್ರಹಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಎಸ್‌ಐಓ ಮತ್ತು ಜಿಐಓ ಉಡುಪಿ ಜಿಲ್ಲೆ ಜಂಟಿಯಾಗಿ ಉಡುಪಿ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಸೋಮವಾರ ಆಯೋಜಿಸಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ನೀಟ್ ವ್ಯವಸ್ಥೆಯ ಮೂಲಕ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ವ್ಯಾಪರವನ್ನಾಗಿ ಮಾಡಿ, ನೈತಿಕ ಮತ್ತು ಸಮಾಜಿಕ ಬದ್ದತೆ ನಾಶ ಮಾಡ ಲಾಗುತ್ತಿದೆ. ವಾಸ್ತವಿಕವಾಗಿ ಈ ನೀಟ್ ಪರೀಕ್ಷಾ ವ್ಯವಸ್ಥೆ ಕೇಂದ್ರಿಕೃತವಾಗಿದ್ದು ಸರ್ವಾಧಿಕಾರಿ ವ್ಯವಸ್ಥೆಯ ಭಾಗ. ಇದನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತ ಬಂದಿದೆ. ಉತ್ತರ ರಾಜ್ಯಗಳ ಕೋಚಿಂಗ್ ಮಾಫಿಯಾಗಳಿಗೆ ಮಣಿದು ಈ ನೀಟ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಓನ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರು ಮಾತನಾಡಿ, ಮಾನವೀಯತೆ, ಮೌಲ್ಯ ಶಿಕ್ಷಣಯಿಲ್ಲದೆ ಪ್ರಸ್ತುತ ಶ್ರೈಕ್ಷಣಿಕ ವ್ಯವಸ್ಥೆ ಬರಗೆಟ್ಟು ಹೋಗಿದೆ. ವಿದ್ಯಾರ್ಥಿಗಳ ಕ್ರಿಯಾತ್ಮಕತೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಕೊಲ್ಲಲಾಗುತ್ತಿದೆ. ಇದರ ಕಾರಣ ಶ್ರೈಕ್ಷಣಿಕ ವ್ಯವಸ್ಥೆ ಇದೀಗ ಶೂನ್ಯವಾಗಿ ಮಾರ್ಪಟ್ಟಿದೆ ಎಂದರು.
ಡಾ.ನಸುಹಾ ಮಾತನಾಡಿ, ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ವೈದ್ಯಕೀಯ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಆಘಾತ ತಂದಿದೆ. 22 ಲಕ್ಷ ಆಕ್ಷಾಂಕ್ಷಿಗಳ ಕನಸನ್ನು, ವರ್ಷಾನುಗಟ್ಟಲೆ ಪಟ್ಟ ಶ್ರಮವನ್ನು ಕೇಂದ್ರ ಸರಕಾರದ ವೈಫಲ್ಯದ ಕಾರಣ ನಾಶವಾಗಿದೆ. ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮವಹಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಸ್‌ಐಓ ಜಿಲ್ಲಾಧ್ಯಕ್ಷ ಆಯಾನ್ ಮಲ್ಪೆ ಮಾತನಾಡಿದರು. ಸಮೀರ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್‌ಐಓನ ರೆಹಾನ್ ಉಡುಪಿ, ಸಾಕೀಬ್ ಹೂಡೆ, ನಿಫಾಲ್ ಕಿದಿಯೂರು, ಮುಝೈನ್ ಆದಿಉಡುಪಿ, ಹಂಝಾ ಹಸನ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ನಿಸಾರ್ ಉಡುಪಿ, ಜಿ.ಐ.ಒನ ಝೀಫಾ ನಾಝ್, ಅಸ್ಮಾ ಬಾನು ಮೊದಲಾದವರು ಉಪಸ್ಥಿತರಿದ್ದರು.
‘ಈ ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕೃತಗೊಳಿಸಬೇಕು. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನೀಟ್ ಪರೀಕ್ಷೆ ಪರಿಚಯಿಸಿ ತನ್ನ ಸರ್ವಾಧಿಕಾರ ಧೋರಣೆ ತೋರಿಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರದ ಸರಕುವನ್ನಾಗಿಸಿದೆ. ಇದು ಕೇಂದ್ರೀಕೃತ ವ್ಯವಸ್ಥೆಯ ವೈಫಲ್ಯ’
-ಪ್ರೊ.ಫಣಿರಾಜ್, ಹಿರಿಯ ಚಿಂತಕರು






