ಕಿನ್ನಿಮುಲ್ಕಿ-ಬ್ರಹ್ಮಗಿರಿ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ: ಸ್ಪೀಡ್ ಬ್ರೇಕರ್ ಅಳವಡಿಸಲು ಆಗ್ರಹ

ಉಡುಪಿ, ಮೇ 26: ನಗರದ ಕಿನ್ನಿಮುಲ್ಕಿಯಿಂದ ಬ್ರಹ್ಮಗಿರಿ ವೃತ್ತವನ್ನು ಸಂಪರ್ಕಿಸುವ ರಸ್ತೆ ಅಗಲೀಕರಣಗೊಂಡಿ ರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಈ ರಸ್ತೆ ಪಾದಚಾರಿಗಳು, ಹಿರಿಯ ನಾಗರಿಕರಿಗೆ ಬಹಳ ಅಪಾಯಕಾರಿ ಎನಿಸಿದೆ. ಆದುದರಿಂದ ಈ ರಸ್ತೆಯಲ್ಲಿ ವೇಗ ನಿಯಂತ್ರಕಗಳ (ಸ್ಪೀಡ್ ಬ್ರೇಕರ್)ಗಳನ್ನು ಅಳವಡಿಸುವಂತೆ ಒತ್ತಾಯಗಳು ಕೇಳಿಬಂದಿವೆ.
ಈ ರಸ್ತೆ ಅಭಿವೃದ್ಧಿಗೊಂಡ ಬಳಿಕ ಬಹುತೇಕ ವಾಹನಗಳು ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಈ ರಸ್ತೆಯನ್ನು ಬಳಸಿಕೊಳ್ಳುತ್ತಿದೆ. ಆದುದ ರಿಂದ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿವೆ. ಅದರಲ್ಲೂ ಬಸ್ ಹಾಗೂ ಘನವಾಹನಗಳು ಈ ರಸ್ತೆಯಲ್ಲಿ ಸಂಚರಿಸು ತ್ತಿರುವುದು ಬಹಳಷ್ಟು ಅಪಾಯಕಾರಿಯಾಗಿದೆ.
ಜನವಸತಿ ಪ್ರದೇಶವಾಗಿರುವ ಈ ರಸ್ತೆಯಲ್ಲಿ ಪ್ರತಿದಿನ ಮಹಿಳೆಯರು, ಮಕ್ಕಳು, ಹಿರಿಯನಾಗರಿಕರು ಓಡಾಡುತ್ತಿರು ತ್ತಾರೆ. ಬನ್ನಂಜೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳಲು ಸರಕಾರಿ ಬಸ್‌ಗಳು ಕೂಡ ಇದೇ ಮಾರ್ಗ ವನ್ನು ಬಳಸುತ್ತಿದೆ. ಇಂತಹ ಸಂದರ್ಭದಲ್ಲಿ ಈ ರಸ್ತೆಯಲ್ಲಿ ವಾಹನ ಸವಾರರು ಅತಿವೇಗದಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಇದು ಬಹಳಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ರಸ್ತೆಯಲ್ಲಿ ಯಾವುದೇ ವೇಗ ನಿಯಂತ್ರಕ ಗಳಿಲ್ಲದ ಕಾರಣ ವಾಹನಗಳು ವೇಗದ ಮಿತಿ ಇಲ್ಲದೆ ಸಂಚರಿಸುತ್ತಿದೆ.
ಅಗ್ನಿಶಾಮಕ ದಳ ಕಚೇರಿ ಸಮೀಪದ ಮೂರು ರಸ್ತೆ ಸೇರುವ ಜಂಕ್ಷನ್, ಕಸ್ಟಮ್ಸ್ ಕಚೇರಿ ಬಳಿ ಹಾಗೂ ನಾಯರ್ ಕೆರೆ ಹಾಶಿಮಿ ಮಸೀದಿ ಬಳಿ ತಕ್ಷಣವೇ ವೇಗ ನಿಯಂತ್ರಕಗಳನ್ನು ಅಳವಡಿಸುವ ಅಗತ್ಯವಿದೆ. ಈ ಮೂರು ಜಂಕ್ಷನ್ ಗಳು ಅತ್ಯಂತ ಅಪಾಯಕಾರಿ ಪ್ರದೇಶಗಳಾಗಿದ್ದು, ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಪ್ರಾಣ ಹಾನಿ ಸಂಭವಿಸುವು ದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ವೇಗ ನಿಯಂತ್ರಕಗಳನ್ನು ಅಳವಡಿಸಬೇಕೆಂದು ಸಮಾಜ ಸೇವಕ ಎಂ.ಇಕ್ಬಾಲ್ ಮನ್ನಾ ಆಗ್ರಹಿಸಿದ್ದಾರೆ.






