ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಮೇ 27: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಬಲಪಾಡಿ ಬಳಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಅಂಬಲಪಾಡಿ ಮೇಲ್ಸೆತುವೆ ಕಾಮಗಾರಿ ಅಂತಿಮ ಹಂತ ತಲುಪಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬುಧವಾರ ಸುಮಾರು 1300 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿ ಕೋಟ ಶ್ರೀನಿವಾಸ ಪೂಜಾರಿ ಅವರು, ಆಧುನಿಕ ತಂತ್ರಜ್ಞಾನದ ಯಂತ್ರಗಳ ಮೂಲಕ ತ್ವರಿತಗತಿಯಲ್ಲಿ ಹೆದ್ದಾರಿಯ ಎರಡೂ ಬದಿಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದರು.
ಬಳಿಕ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ ಸಂಸದರು, ಮೇಲ್ಸೇತುವೆ ಒಂದು ಭಾಗವನ್ನು ಮುಕ್ತಗೊಳಿಸುವ ಬದಲು ಸಂಪೂರ್ಣ ಮೇಲ್ಸೇತುವೆ ಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲು ಕಾಮಗಾರಿಗೆ ವೇಗ ನೀಡು ವಂತೆ ತಿಳಿಸಿದರು. ಪೂರ್ಣ ಮೇಲ್ಸೇತುವೆ ಮುಕ್ತಗೊಳಿಸಲು ನಿಗದಿತ ಸಮಯಕ್ಕಿಂತ ಒಂದು ವಾರ ಹೆಚ್ಚು ಸಮಯಾವಕಾಶ ಕೋರಿದ ಇಲಾಖಾ ಅಧಿಕಾರಿಗಳು ಜೂನ್ 15ರಿಂದ 20ನೇ ತಾರೀಖಿನ ಒಳಗೆ ಅಂಬಲಪಾಡಿ ಮೇಲ್ಸೇತುವೆಯ ಎರಡೂ ಬದಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಸಂಸದರಿಗೆ ಭರವಸೆ ನೀಡಿದರು.
ಸಂಸದ ಕೋಟರೊಂದಿಗೆ ಇಲಾಖಾಧಿಕಾರಿ ನವೀನ್ ಮತ್ತು ಸಹಾಯಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.






