ಪಿಣರಾಯಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸುರೇಶ ಕಲ್ಲಾಗರ

ಉಡುಪಿ, ಮೇ 29: ಕೇಂದ್ರ ಸರಕಾರವು ಸಿಪಿಎಂ ಪಕ್ಷವನ್ನು ಮುಗಿಸಲು ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಮನೆ ಮೇಲೆ ಇಡಿ ದಾಳಿ ನಡೆಸುತ್ತಿದೆ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಆರೋಪಿಸಿದ್ದಾರೆ.
ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಮನೆ ಮೇಲೆ ನಡೆದ ಇ.ಡಿ. ದಾಳಿ ಹಾಗೂ ಹೊಸದಿಲ್ಲಿಯಲ್ಲಿ ಪಕ್ಷದ ಮುಖಂಡರ ಬಂಧನವನ್ನು ಖಂಡಿಸಿ ಶುಕ್ರವಾರ ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಪಿಣರಾಯ್ ವಿಜಯನ್‌ಗೂ ಎಕ್ಸಾಲಾಜಿಕ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಆದರೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪಿಣರಾಯ್ ವಿಜಯನ್ ಅವರನ್ನು ಗುರಿ ಮಾಡಿ ಕೇರಳ ದಲ್ಲಿ ಪಕ್ಷವನ್ನು ಮುಗಿಸಲು ಹತಾಶ ಪ್ರಯತ್ನ ನಡೆಸುತ್ತಿದೆ. ಆದರೆ ಕೇರಳದ ಜನ ಸಿಪಿಎಂ ಪಕ್ಷ ಹಾಗೂ ಮುಖಂಡ ರನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂಬುವುದನ್ನು ನಿನ್ನೆ ಇಡಿ ಅಧಿಕಾರಿಗಳು ತನಿಖೆಗೆ ಬಂದಾಗ ಸೇರಿದ ಜನಸ್ತೋಮವೇ ಸಾಕ್ಷಿ ಎಂದು ಕಲ್ಲಾಗಾರ ಹೇಳಿದರು.
ಸಿಪಿಎಂ ಪಕ್ಷ ತನಿಖೆಗೆ ಅಡ್ಡಿಪಡಿಸುತ್ತಿಲ್ಲ. ಆದರೆ ವಿನಾಕಾರಣ ರಾಜಕೀಯ ಪ್ರೇರಿತವಾಗಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು, ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಬೆಳೆಸಲು ಮಾಡುವ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಿಪಿಎಂ ಕೇಂದ್ರ ಸಮಿತಿ ನಾಯಕರು ಮೊನ್ನೆ ಹೊಸದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯದ ಎದುರು ಶಾಂತಿಯುತ ವಾಗಿ ಪ್ರತಿಭಟಿಸುತ್ತಿದ್ದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ಬಂಧಿಸಿರುವ ಕ್ರಮ ದೇಶದ ಪ್ರಜಾ ಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ. ಇದರ ವಿರುದ್ಧ ಸಿಪಿಎಂ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದು ಸುರೇಶ್ ಹೇಳಿದರು.
ಈ ದೇಶದಲ್ಲಿ ದುಡಿಯುವ ವರ್ಗ ಇರುವ ತನಕ ದುಡಿಯುವ ವರ್ಗದ ರಾಜಕೀಯವನ್ನು ಕೊನೆಗಾಣಿಸಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಜನರ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸಿಪಿಎಂ ಪಕ್ಷ ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಜಗತ್ತಿನ ಎಲ್ಲಾ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದು ಈ ಕೆಂಬಾವುಟದ ಚರಿತ್ರೆಯಾಗಿದೆ ಎಂದು ಅವರು ನುಡಿದರು.
ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ ವಿ. ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಮ್ಯುನಿಸ್ಟ್ ನಾಯಕರು ಸ್ವಾತಂತ್ರ್ಯ ದಿನಾಚರಣೆ ದಿನದಂದು ಜೈಲಿನಲ್ಲೆ ಇದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿಯೂ ಜೈಲಲ್ಲಿ ಹಲವರು ಶಿಕ್ಷೆಯನ್ನು ಅನುಭವಿಸಿದ್ದರು. ತ್ರಿಪುರ, ಕೋಲ್ಕತಾದಲ್ಲಿ ಫ್ಯಾಶಿಸ್ಟ್ ದಾಳಿಯನ್ನು ಎದುರಿಸಿ ಜೀವಕೊಟ್ಟ ಕಮ್ಯುನಿಸ್ಟ್ ನಾಯಕರನ್ನು ನೀವು ಹೆದರಿಸಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೊಲ್ಲ, ಶೀಲಾವತಿ, ಉಮೇಶ್ ಕುಂದರ್, ಸುರೇಂದ್ರ ಎಚ್, ಬಲ್ಕೀಸ್, ಸಂಜೀವ ಬಳ್ಕೂರು, ಸರೋಜ, ಚಿಕ್ಕ ಮೊಗವೀರ ಗಂಗೊಳ್ಳಿ ಇದ್ದರು. ಕವಿರಾಜ್ ಎಸ್ ಕಾಂಚನ್ ಸ್ವಾಗತಿಸಿ ವಂದಿಸಿದರು.






