ಬಾಳೆಬರೆ ಘಾಟಿ: ಕಾಮಗಾರಿ ಶೀಘ್ರ ಮುಗಿಸಲು ಸಂಸದ ಸೂಚನೆ

ಬೈಂದೂರು, ಮೇ 29: ಬಾಳೆಬರೆ ಘಾಟಿ ಕುಸಿತದಿಂದ ಸಂಪರ್ಕ ಮಾರ್ಗ ಬದಲಿಸಿ ಘಾಟಿ ಮುಚ್ಚಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಿದ್ದಾಪುರ ಪೇಟೆ ಕಳೆದ ಒಂದೂವರೆ ತಿಂಗಳಿನಿಂದ ಸಂಪೂರ್ಣ ಸಂಪರ್ಕ ಕಡಿತ ಗೊಂಡಿದೆ. ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಮಾರ್ಗವನ್ನು ವಾಹನಗಳಳ ಸಂಚಾರಕ್ಕೆ ಮುಕ್ತಗೊಳಿಸು ವಂತೆ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಬಾಳೆಬರೆ ಘಾಟಿಯ ಸಂಪರ್ಕ ಕಡಿತರಿಂದ ಶಾಲಾ ಮಕ್ಕಳು, ನಿತ್ಯ ಪ್ರಯಾಣಿಸುವವರ ಸಹಿತ ವ್ಯಾಪಾರ, ವಹಿವಾ ಟಿಗೆ ಬಹಳಷ್ಟು ತೊಂದರೆ ಯಾಗುತ್ತಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು ಸ್ಥಳಕ್ಕೆ ಸದ್ಯವೇ ಭೇಟಿ ನೀಡುವುದಾಗಿ ಬಿ.ವೈ. ರಾಘವೇಂದ್ರ ಹೇಳಿದರು.
ಬೈಂದೂರು ತಾಲೂಕಿನ ಗೋಳಿಹೊಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆಗಾಗಿ ಶುಕ್ರವಾರ ಆಗಮಿಸಿದ್ದ ವೇಳೆ ‘ವಾರ್ತಾಭಾರತಿ’ ಜೊತೆ ಮಾತನಾಡಿದ ಅವರು, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯವಿರು ವಷ್ಟು ಸಿಬ್ಬಂದಿ ಇದ್ದಿದ್ದರೆ ಕೊಲ್ಲೂರಿನಲ್ಲಿ ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ವೈದ್ಯರು, ಸಿಬ್ಬಂದಿ ಕೊರತೆ ಕಾಣುತ್ತಿದೆ. ರಾಜ್ಯದಾದ್ಯಂತ ವಿವಿದೆಡೆ ಜಿಲ್ಲಾಸ್ಪತ್ರೆ ಸಹಿತ, ಸಮುದಾಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೇ.50ರಷ್ಟು ವೈದ್ಯರು, ಸಿಬ್ಬಂದಿಗಳು ಮಾತ್ರ ನಿಯೋಜನೆಗೊಂಡಿದ್ದಾರೆ ಎಂದರು.
ರಾಜ್ಯ ಸರಕಾರದ ಮೂರುವರ್ಷ ಕಳೆದಿದ್ದು ಬಾಕಿಯುಳಿದ ಎರಡು ವರ್ಷದಲ್ಲಿ ಗುಡ್ಡಗಾಡು ಪ್ರದೇಶ, ಲಕ್ಷಾಂತರ ಭಕ್ತರು ಆಗಮಿಸುವುದನ್ನು ಗಮನದಲ್ಲಿರಿಸಿಕೊಂಡು ಆದ್ಯತೆ ಮೇರೆಗೆ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸುವ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಇತರರು ಉಪಸ್ಥಿತರಿದ್ದರು.






