ಮಾಳ - ತನಿಕೋಡು ಗೇಟ್ ರಸ್ತೆ ಸಂಸದ ಕೋಟ ಪರಿಶೀಲನೆ

ಉಡುಪಿ, ಮೇ 29: ಕಾರ್ಕಳ ತಾಲೂಕಿನ ಮಾಳ ಗೇಟಿನಿಂದ ಎಸ್.ಕೆ. ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್‌ವರೆಗಿನ 29 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಹೆದ್ದಾರಿ ಅಭಿವೃದ್ಧಿಗೆ ಸುಮಾರು 550 ಕೋಟಿ ರೂಪಾು ವೆಚ್ಚದ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಕಾಮಗಾರಿಗೆ ಅಗತ್ಯರುವ ಅರಣ್ಯ ಭೂಮಿ ಸಂಬಂಧಿತ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಮಾಳ ಗೇಟ್ ಆರಂಭದಿಂದ ರಸ್ತೆ ಇಕ್ಕೆಲಗಳಲ್ಲಿ ಬರುವ ಅರಣ್ಯ ತೆರವುಗೊಳಿಸಲು ಕಂದಾಯ ಇಲಾಖೆಯ ಮೂಲಕ ಅರಣ್ಯ ಇಲಾಖೆಗೆ ಸುಮಾರು 50 ಎಕರೆ ಭೂಮಿ ಯನ್ನು ವರ್ಗಾಯಿಸಬೇಕಾಗಿದೆ. ಈ ಸಂಬಂಧ ಕಡತ ವಿಲೇವಾರಿಗಾಗಿ ಶನಿವಾರ ಶಿವಮೊಗ್ಗ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ, ಇಲಾಖೆಯ ಮಾಹಿತಿಯಂತೆ ಹಿಂದೆ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸೇರಿದಂತೆ ಮೂರು ಸೇತುವೆ ಗಳು ಮಂಜೂರಾಗಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದ ಕಾರಣ ಕಾಮಗಾರಿ ರದ್ದಾಗಿತ್ತು. ಇದೀಗ ಅಗತ್ಯ ಅನುಮತಿ ದೊರಕುವ ನಿರೀಕ್ಷೆಯಲ್ಲಿ ರಸ್ತೆ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಮತ್ತು ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ 1999ರಿಂದ ಅಂದರೆ ಸುಮಾರು 25 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಳ-ತನಿಕೋಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶೀಘ್ರ ಚಾಲನೆ ಸಿಗಲಿದೆ ಎಂದು ಸಂಸದ ಕೋಟ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದರೊಂದಿಗೆ ರಾ.ಹೆದ್ದಾರಿ ಇಲಾಖೆಯ ನವೀನ್ ರಾಜ್, ಅರಣ್ಯ ಇಲಾಖೆಯ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.






