ಎಸ್ಸಿ-ಎಸ್ಟಿ ಯುವ ಉದ್ಯಮಶೀಲತಾ ಸಮಾವೇಶ ’ಭೀಮೋದ್ಯಮ’ ಉದ್ಘಾಟನೆ

ಕುಂದಾಪುರ, ಮೇ 30: ಬದುಕು ಕಟ್ಟಿಕೊಳ್ಳಲು ಪ್ರತಿಹಂತದಲ್ಲೂ ಪ್ರಯತ್ನಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರು ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಎತ್ತರದ ಸ್ಥಾನಕ್ಕೆ ಏರಬೇಕು. ಕೆಲಸ ಹುಡುಕುವುದು, ಕೆಲಸ ಮಾಡುವುದಕ್ಕಿಂತ ತಮ್ಮದೆ ಉದ್ಯಮ ಸೃಷ್ಟಿಸಿ ಹಲವರಿಗೆ ಕೆಲಸ ನೀಡುವಷ್ಟು ಬೆಳೆದು ಧ್ವನಿ ಇಲ್ಲದವರಿಗೆ ಧ್ವನಿಯಾಗಲು ಇಂತಹ ವೇದಿಕೆಗಳು ಸಹಕಾರಿ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಎಸ್ಸಿ-ಎಸ್ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಹಾಗೂ ಸಮೃದ್ಧ ಬೈಂದೂರು ಸಂಯೋಜನೆಯಲ್ಲಿ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಪರಿಕಲ್ಪನೆಯಲ್ಲಿ ಶನಿವಾರ ಹೆಮ್ಮಾಡಿ ಜಯಶ್ರೀ ಸಭಾಭವನದಲ್ಲಿ ನಡೆದ ಎಸ್ಸಿ-ಎಸ್ಟಿ ಯುವ ಉದ್ಯಮಶೀಲತಾ ಸಮಾವೇಶ ’ಭೀಮೋದ್ಯಮ-2026’ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉದ್ಯಮಶೀಲತೆಯಲ್ಲಿ ಸ್ವಂತ ಉದ್ಯಮ ಕಟ್ಟಿ ಬೆಳೆಸಲು ಅನುಭವ, ಮಾರುಕಟ್ಟೆ, ಕಷ್ಟನಷ್ಟ, ಆರ್ಥಿಕ, ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ತಾವುಮಾಡುವ ಉದ್ಯಮದ ಬಗ್ಗೆ ನಿಖರತೆ, ಖಚಿತತೆ ಅಗತ್ಯ. ಇದನ್ನೆಲ್ಲಾ ಮುನ್ನೆಡೆಸಿ ಕೊಂಡು ಶ್ರಮವಹಿಸಿ ದುಡಿದರೆ ಏಳಿಗೆ ಸಾಧ್ಯ. ಮೀನುಗಾರಿಕಾ ಇಲಾಖೆ ಸಹಿತ ವಿವಿಧ ಇಲಾಖೆಗಳಡಿ ಸ್ವ ಉದ್ಯಮಕ್ಕೆ ವಿಫುಲ ಅವಕಾಶಗಳಿದೆ. ತಮ್ಮ ಇಚ್ಚೆಯ ಉದ್ಯಮವನ್ನು ಆರಿಸಿಕೊಂಡು ಮಾಹಿತಿ ಪಡೆದು ಮುಂದುವರೆಯಬೇಕು ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದಿನಕರ್ ಬಾಬು, ಮೋಹನಂಗಯ್ಯ ಸ್ವಾಮಿ, ಮಹಾಲಿಂಗ ನಾಯ್ಕ್, ಕುಮಾರದಾಸ್, ಡಾ. ಶಿವಾನಂದ ತಲ್ಲೂರು, ಎಸ್.ನಾರಾಯಣ್ ಅವರನ್ನು ಸನ್ಮಾನಿಸಲಾಯಿತು.
ಸಾಮರಸ್ಯ ವೇದಿಕೆ ಬೆಂಗಳೂರು ಇಲ್ಲಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ್ ವಿಷಯ ಮಂಡಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಎಸ್ಸಿ ಮೋರ್ಚಾದ ಉಪಾಧ್ಯಕ್ಷ ದಿನಕರ ಬಾಬು, ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಕೃಷ್ಣಮೂರ್ತಿ, ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ್, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಕೆ.ರ್ಆ., ಉಪಾಧ್ಯಕ್ಷೆ ಮಾಲತಿ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸಿ-ಎಸ್ಟಿ ಅಧ್ಯಯನ ಟ್ರಸ್ಟ್‌ನ ಮೋಹನಂಗಯ್ಯ ಸ್ವಾಮಿ ಪ್ರಾಸ್ತಾವನೆಗೈದರು. ಭೀಮೋಧ್ಯಮ ಸಂಚಾಲಕ ಅಕ್ಷಯ್ ಮಂಕಿ ಸ್ವಾಗತಿಸಿದರು. ಸುಂದರ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು.






