‘ಕೊಂಕಣಿ ರಂಗಾಂತರ ರಂಗ’ ರಂಗಭೂಮಿ ಕಾರ್ಯಗಾರ

ಉಡುಪಿ, ಮೇ 31: ಅನಂತ ವೈದಿಕ ಕೇಂದ್ರ ಉಡುಪಿ ವತಿಯಿಂದ ರಂಗಕರ್ಮಿ, ಚಲನಚಿತ್ರ ನಿರ್ದೇಶಕ ಕಾಸರ ಗೋಡು ಚಿನ್ನಾ ನಿರ್ದೇಶನದಲ್ಲಿ ಎರಡು ದಿನಗಳ ಕಾಲ ಕೊಂಕಣಿ ರಂಗಾಂತರ ರಂಗ ರಂಗಭೂಮಿ ಕಾರ್ಯಗಾರ ವನ್ನು ಉಡುಪಿ ಒಳಕಾಡು ಪದ್ಮಾವತಿ ಸಭಾಸದನದಲ್ಲಿ ಆಯೋಜಿಸಲಾಗಿತ್ತು.
ಶನಿವಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ತರಂಗ ವಾರ ಪತ್ರಿಕೆ ಸಂಪಾದಕಿ ಡಾ.ಸಂಧ್ಯಾ ಪೈ ಮಾತನಾಡಿ, ಕೊಂಕಣಿ ಸಾಹಿತ್ಯ, ಭಾಷೆ, ಸಂಸ್ಕೃತಿ ಉಳಿಸಿ ಬೆಳಸಲು ಇಂತಹ ಕಾರ್ಯಗಾರ ನಿರಂತರವಾಗಿ ನಡೆಯಬೇಕು. ಮಕ್ಕಳಿಗೆ ಕಲೆ, ಸಂಸ್ಕೃತಿ, ಜೀವನದ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿಯನ್ನಾಗಿ ರೊಪಿಸಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ್ದಲ್ಲಿ ನಾವು ಕೊಡ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.
ಕೊಂಕಣಿ ಆಕಾಡಮಿ ಮಾಜಿ ಅಧ್ಯಕ್ಷ ಹಾಗೂ ಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ, ಕೊಂಕಣಿ ಭಾಷೆ, ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ರಂಗ ಕ್ಷೇತ್ರದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಸಮಾಜ ಬಾಂಧವರು ಕೈ ಜೋಡಿಸಬೇಕು ಎಂದು ತಿಳಿಸಿದರು.
ಉಡುಪಿ ಪುತ್ತೂರು ಶ್ರೀಲಕ್ಷ್ಮೀ ವೆಂಕಟೇಶ್ ದೇವಸ್ಥಾನದ ಆಡಳಿತ ಮೊಕ್ತೇಸರ ವಸಂತ ನಾಯಕ್, ದೈವಜ್ಞ ಬ್ರಾಹ್ಮಣ ಸಮಾಜ ಅಧ್ಯಕ್ಷ ಶಿವಶಂಕರ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ಸಮಾಜ ಸೇವಕ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ ವಹಿಸಿದ್ದರು.
ಕೊಂಕಣಿ ರಂಗಾ ತರಂಗ ಸಂಚಾಲಕ ಶಶಿ ಭೂಷಣ ಕಿಣಿ ಉಪಸ್ಥಿತರಿದ್ದರು. ಅನಂತ ವೈದಿಕ ಕೇಂದ್ರದ ಆಡಳಿತ ನಿರ್ದೇಶಕ ವೇದಮೂರ್ತಿ ಚೆಂಪಿ ರಾಮಚಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಚಿನ್ನಾ ಶಿಬಿರಾರ್ಥಿಗಳಿಗೆ ರಂಗ ತರಬೇತಿಗಳಾದ ಧ್ವನಿ, ಭಾಷೆ, ಅಭಿನಯ ಹಾಗೂ ಮೂಕ ಅಭಿನಯ, ವಿವಿಧ ಭಾಷೆಗಳ ಮೂಲಕ ಅಭಿನಯಿಸುವ ಕಲಾ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರು.






