ಉಪ್ಪುಂದ: ವಿವಿದ್ದೋದ್ದೇಶ ಮೀನುಗಾರಿಕಾ ಕೇಂದ್ರಕ್ಕೆ ಶಿಲಾನ್ಯಾಸ
ಬೈಂದೂರು, ಮೇ 31: ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಪ್ಪುಂದ ಗ್ರಾಮದಲ್ಲಿ ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ‘ವಿವಿದ್ದೋದ್ದೇಶ ಮೀನುಗಾರಿಕಾ ಕೇಂದ್ರ’ಕ್ಕೆ ಉಪ್ಪುಂದ ಅರಮಕೋಡಿ ಶ್ರೀಈಶ್ವರ ದೇವಸ್ಥಾನದ ಪರಿಸರದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ದೇಶದ ಪ್ರಗತಿಗೆ ಆಧಾರವಾಗಿರುವ ಮೀನುಗಾರರು ಪರಿಶ್ರಮದ ಜತೆಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಉಪ್ಪುಂದದಲ್ಲಿ ವಿವಿಧೋದ್ಧೇಶ ಮೀನುಗಾರಿಕಾ ಕೇಂದ್ರ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದರು.
ಈ ಭಾಗದ ಮೂಲ ಸೌಕರ್ಯ ಹಾಗೂ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬಲಗೊಳ್ಳಲಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ತಳಮಟ್ಟದ ಜನರಿಗೂ ತಲುಪಿಸಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ದೇವಸ್ಥಾನದ ಹಾಗೂ ಮೀನುಗಾರರ ವತಿಯಿಂದ ಸಂಸದರನ್ನು, ಶಾಸಕರನ್ನು ಹಾಗೂ ಗುತ್ತಿಗೆದಾರರನ್ನು ಗೌರವಿಸಲಾಯಿತು.
ರಾಣಿಬಲೆ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ ಖಾರ್ವಿ, ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ ಖಾರ್ವಿ, ನವೀನಚಂದ್ರ ಉಪ್ಪುಂದ, ಅರಮಕೋಡಿ ಈಶ್ವರ ದೇವಸ್ಥಾನದ ಅಧ್ಯಕ್ಷ ಸುರೇಶ ಖಾರ್ವಿ, ಈಶ್ವರ ಸೇವಾ ಸಮಿತಿ ಅಧ್ಯಕ್ಷ ರಾಮ ಖಾರ್ವಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಮರವಂತೆ, ಮುಖಂಡರಾದ ಬಿ.ಎಸ್. ಸುರೇಶ ಶೆಟ್ಟಿ ಉಪ್ಪುಂದ, ಸುರೇಶ ಬಟವಾಡಿ, ಪ್ರಿಯದರ್ಶಿನಿ ದೇವಾಡಿಗ, ರಮೇಶ ಪೂಜಾರಿ, ಶರತ ಕುಮಾರ ಶೆಟ್ಟಿ, ಬಿ.ಎಚ್.ಪಿ.ನಾಗರಾಜ ಉಪಸ್ಥಿತರಿದ್ದರು.
ಜಗನ್ನಾಥ ಖಾರ್ವಿ ಸ್ವಾಗತಿಸಿದರು. ಆನಂದ ಖಾರ್ವಿ ಕಾರ್ಯಕ್ರಮ ನಿರೂಪಿಸಿ, ಮುರುಳೀಧರ ವಂದಿಸಿದರು.








