ಶಿಕ್ಷಣದಿಂದ ಸಮಸ್ತ ಶೋಷಣೆಗಳಿಂದ ಮುಕ್ತಿ ಸಾಧ್ಯ: ಮಂಜುನಾಥ್ ಗಿಳಿಯಾರು

ಕುಂದಾಪುರ, ಮೇ 31: ಶಿಕ್ಷಣದಿಂದ ಮಾತ್ರ ಸಮಸ್ತ ಶೋಷಣೆಗಳಿಂದ ಮುಕ್ತಿ ಪಡೆದು ಸಮಾಜದಲ್ಲಿ ಸ್ವಾಭಿಮಾನಿ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಅಕ್ಷರವಂತರು ನಮ್ಮತನವನ್ನು ಬೆಳೆಸಿಕೊಂಡು ಸ್ವಾಭಿಮಾನದಿಂದ ಬದುಕ ಬಹುದು. ಬಡವರು, ಮಧ್ಯಮವರ್ಗದವರ ಮಕ್ಕಳು ಕಲಿತು ಸಾಧನೆ ಮಾಡಲು ವಿಫುಲ ಅವಕಾಶಗಳಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ್ ಗಿಳಿಯಾರು ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕೋಟ ಹೋಬಳಿ ಘಟಕದ ಆಶ್ರಯದಲ್ಲಿ ಕೋಟ ಸಿಎ ಬ್ಯಾಂಕಿನ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ರವಿವಾರ ಆಯೋಜಿಸಲಾದ 27ನೇ ವರ್ಷದ ಉಚಿತ ನೋಟು ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ’ಅಕ್ಷರ ದಕ್ಕರೆ-2026’ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಡಾ.ಬಿ.ಆರ್. ಅಂಬೇರ್ಡ್ಕ ಅವರು ತಮ್ಮ ಕಷ್ಟದ ಜೀವನ, ಸಮಾಜ ದೂರವಿಟ್ಟ ಕಾಲದ ನಡುವೆಯೂ ಛಲದಿಂದ ವಿದ್ಯಾಭ್ಯಾಸ ಮಾಡಿ 32 ಪದವಿಗಳನ್ನು ಪಡೆದು ವಿದೇಶದಲ್ಲಿ ವಿದ್ಯಾರ್ಜನೆ ಮಾಡಿ ಪಿಎಚ್‌ಡಿ ಮಾಡಿದರು. ಛಲದಿಂದ ಸಾಧನೆ ಗೈದ ವಿದ್ಯಾರ್ಥಿಗಳಿಂದ ನಮ್ಮ ಕಾರ್ಯಕ್ರಮ ಉದ್ಘಾಟನೆ ಮಾಡಿಸಲಾಗಿದ್ದು ಅವರ ಜ್ಞಾನ ದಾಹ ಹೆಚ್ಚಬೇಕು. ಸಮಾಜದಿಂದ ಪಡೆದಿದ್ದನ್ನು ಮತ್ತೆ ಸಮಾಜಕ್ಕೆ ಹಿಂದಿರುಗಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶ ಗಳು ನಮಗೆ ಮಾದರಿ ಯಾಗಬೇಕು. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲ ಆಧಾರವಾಗಿದ್ದು, ಕಟ್ಟಕಡೆಯ ಸಮಾಜದ ಮಗುವಿಗೂ ಶಿಕ್ಷಣ ಸಿಗಬೇಕು. ಮಕ್ಕಳ ಜೀವನಕ್ಕೆ ಶಿಕ್ಷಣವೇ ಶಾಶ್ವತ ಸಂಪತ್ತಾಗಿದ್ದು, ಅದನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಜಾತಿ-ಮತ ಭೇದ ಮರೆತು ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ದೊರಕಲು ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ‘ಅಕ್ಷರದಕ್ಕರೆ’ ಪುರಸ್ಕಾರವನ್ನು ಎಸೆಸೆಲ್ಸಿಯಲ್ಲಿ ರಾಜ್ಯದಲ್ಲೇ ಪ್ರಥಮ ರ್ಯಾಂಕ್ ಗಳಿಸಿದ ಕುಂದಾಪುರದ ಪ್ರೀತಮ್ ಪೂಜಾರಿ, ಸಂಸತ್ ಭವನದಲ್ಲಿ ಅಂಬೇಡ್ಕರ್ ಕುರಿತು ಭಾಷಣಗೈದ ಮಹಾಲಕ್ಷ್ಮಿ ಸಿ.ಜಿ ಅವರಿಗೆ ನೀಡಲಾಯಿತು. ಸಮುದಾಯ ಸಾಧಕ ಪುರಸ್ಕಾರವನ್ನು ಉಪನ್ಯಾಸಕ ಮಂಜುನಾಥ್, ಬಿಸ್ಸೆನ್ನೆಲ್ ನೌಕರ ಮಣೂರಿನ ಪ್ರಭಾಕರ್ ಅವರಿಗೆ ನೀಡಿ ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ದಸಂಸ ಕೋಟ ಹೋಬಳಿಯ ಸಂಚಾಲಕ ನಾಗರಾಜ್ ಪಡುಕರೆ ವಹಿಸಿದ್ದರು.
ಉದ್ಯಮಿಗಳಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಚೇತನ್ ಶೆಟ್ಟಿ ಬ್ರಹ್ಮಾವರ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಜಿಲ್ಲಾ ಸಮಿತಿಯ ಸದಸ್ಯ ಶ್ರೀನಿವಾಸ ವಡ್ಡರ್ಸೆ, ತಾಲೂಕು ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಹಿರಿಯ ಮುಖಂಡ ಐತ ಕಾರ್ಕಡ, ದಸಂಸ ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್, ಗಣಪತಿ ಜೂನಿಯರ್ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲ ರತ್ನಾಕರ ಬನ್ನಾಡಿ, ಕೋಟ ವಿವೇಕ ಪದವಿಪೂರ್ವ ಕಾಲೇಜು ಉಪನ್ಯಾಸಕ ಸಂಜೀವ ಸಿ.ಗುಂಡ್ಮಿ, ವಿವೇಕ ಪ್ರೌಢಶಾಲಾ ಮಹಿಳಾ ವಿಭಾಗದ ಮುಖ್ಯ ಶಿಕ್ಷಕ ಪ್ರೇಮಾನಂದ ಬಾರ್ಕೂರು ಉಪಸ್ಥಿತರಿದ್ದರು.
ದಸಂಸ ತಾಲೂಕು ಪ್ರಧಾನ ಸಂಚಾಲಕ ಶ್ಯಾಮ ಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಪ್ರಭಾಕರ್ ಮಣೂರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು. ರವಿ ಬನ್ನಾಡಿ ಸಹಕರಿಸಿದರು.
ಶಿಕ್ಷಣವೇ ಸಮಾಜದ ಪರಿವರ್ತನೆಗೆ ಹಾದಿಯಾಗಿದ್ದು, ಶಿಕ್ಷಣ, ಸಂಘಟನೆ, ಹೋರಾಟದ ಕರೆ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪುಸ್ತಕವು ಭವಿಷ್ಯದ ಕನಸು ನನಸಾಗಿಸುವ ಸಾಧನ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು
-ಪ್ರೀತಮ್ ಪೂಜಾರಿ, ಎಸೆಸೆಲ್ಸಿ ಸಾಧಕ ವಿದ್ಯಾರ್ಥಿ






