ನಾಗರಿಕ ಪ್ರಜ್ಞೆ ರೂಪಿಸುವಲ್ಲಿ ಶಿಕ್ಷಕರ ಕಾಳಜಿ ಪರಿಣಾಮಕಾರಿ: ಸಿಇಓ ಬಾಯಲ್

ಉಡುಪಿ, ಜೂ.1: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ, ಸಂಖ್ಯಾಜ್ಞಾನದ ಜೊತೆಗೆ ಮೌಲ್ಯಗಳನ್ನು ಬೆಳೆಸಿ ಕೊಳ್ಳಲು ಪೂರಕ ವಾತಾವರಣವನ್ನು ಸೃಷ್ಟಿಸಬೇಕು. ನಾಗರೀಕ ಪ್ರಜ್ಞೆಯನ್ನು ರೂಪಿಸುವಲ್ಲಿ ಶಿಕ್ಷಕರ ವೈಯಕ್ತಿಕ ಕಾಳಜಿಗಳು ಬಹಳ ಪರಿಣಾಮಕಾರಿಯಾಗಲಿವೆ. ಯಾವುದೇ ವಿದ್ಯಾರ್ಥಿಯು ಅನುತ್ತೀರ್ಣತೆಯ ನೋವನ್ನು ಅನುಭವಿಸ ದಂತೆ ಕಾಳಜಿಯನ್ನು ವಹಿಸಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಮಾಹೆ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾ ಗಾರ ಮತ್ತು 2025-26ನೇ ಸಾಲಿನಲ್ಲಿ ಶೇ.100 ಫಲಿತಾಂಶ ಪಡೆದ ಜಿಲ್ಲೆಯ ಪ್ರೌಢ ಶಾಲೆಗಳ ಅಭಿನಂದನಾ ಸಭೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತುಮಕೂರಿನ ರಾಮಕೃಷ್ಣ ಆಶ್ರಮದ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಕೆರಳಿಸುವುದು, ಅವರ ಅಭಿವ್ಯಕ್ತಿಯನ್ನು ಉತ್ತಮಪಡಿಸಲು ನಿರಂತರ ಶ್ರಮದ ಅಗತ್ಯ ಇದೆ. ಶಿಕ್ಷಕರು ಬದ್ಧತೆ ಮತ್ತು ಪ್ರೀತಿಯಿಂದ ತೊಡಗಿಕೊಂಡಾಗಿ ಶ್ರೇಷ್ಠ ಫಲಿತಾಂಶವನ್ನು ದಾಖಲಿಸುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಶನ್‌ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಶಾಲಾ ಶಿಕ್ಷಣ ವಿಭಾಗದಲ್ಲಿ ಅತ್ಯುತ್ತಮವಾದ ಸಾಧನೆ ಯನ್ನು ದಾಖಲಿಸುತ್ತಾ ಬಂದಿದೆ. ಪ್ರಮಾಣ, ಗುಣಮಟ್ಟ ಎರಡೂ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧನೆಗೆ ಮುಖ್ಯ ಶಿಕ್ಷಕರು ಮತ್ತು ಇಲಾಖೆಯು ನೀಡುತ್ತಿರುವ ಮಾರ್ಗದರ್ಶನ ಸ್ತುತ್ಯರ್ಹ ಎಂದು ತಿಳಿಸಿದರು.
ಅತ್ಯುತ್ತಮ ಅಂಕಗಳನ್ನು ದಾಖಲಿಸಿದ 10 ವಿದ್ಯಾರ್ಥಿಗಳಿಗೆ ಹಾಗೂ ಶೇ.100 ಫಲಿತಾಂಶವನ್ನು ದಾಖಲಿಸಿದ 197 ಶಾಲೆಗಳ ಮುಖ್ಯಶಿಕ್ಷಕರಿಗೆ ಈ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಶ್ರೀಧರ ಆರ್.ಪೈ, ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಮಾತನಾಡಿದರು.
ಡಾ.ಅಶೋಕ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಲೋಕೇಶ ಸಿ. ಸ್ವಾಗತಿಸಿ, ಡಯಟ್‌ನ ಉಪನ್ಯಾಸಕ ಡಾ.ಕಿಶೋರ ಕುಮಾರ ಶೆಟ್ಟಿ ವಂದಿಸಿದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.






