ಸುಮನಸಾ ಕೊಡವೂರು ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಜೂ.1: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಮತ್ತು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯು ರವಿವಾರ ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಕಾರ್ಯಕ್ರಮವನ್ನು ಪಡುಬಿದ್ರಿಯ ಯಸ್ಸೆನ್ ಸ್ಪೆಶನ್ ಎಕಾನೋಮಿಕ್ ಜೋನ್ ಮುಖ್ಯಸ್ಥ ಅಶೋಕ್ ಶೆಟ್ಟಿ ಉದ್ಘಾಟಿಸಿದರು.
ರಜತ ಮಹೋತ್ಸವದ ಕೈಪಿಡಿ ಬಿಡುಗಡೆ ಮಾಡಿದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಮಾತನಾಡಿ, ವಿಭಿನ್ನ ತಂತ್ರಜ್ಞಾನಗಳು ಬಂದಿರುವುದರಿಂದ ಮಕ್ಕಳು ಮನಸ್ಸು ಅತ್ತ ಹೋಗಿದೆ. ಮೊಬೈಲ್ ಬಂದು ಮಕ್ಕಳು ಹಾಳಾಗಿದ್ದಾರೆ ಎಂದು ಅನೇಕರು ದೂರುತ್ತಾರೆ. ಆದರೆ, ದೂರುವವರ ಕೈಯಲ್ಲಿಯೂ ಮೊಬೈಲ್ ಇರುತ್ತದೆ. ಕ್ರಿಯಾಶೀಲ ಗುಂಪು ಇದ್ದರೆ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗುವಂತೆ ಮಾಡಬಹುದು ಎಂಬುದನ್ನು ಸುಮನಸಾ ಕೊಡವೂರು ಮಾಡಿ ತೋರಿಸಿದೆ’ ಎಂದು ತಿಳಿಸಿದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ನಾವೆಲ್ಲ ಜನಪರವಾಗಿ, ಜಾತ್ಯತೀತ, ಸಂವಿಧಾನಬದ್ಧವಾಗಿ ಯೋಚನೆ ಮಾಡುತ್ತೇವೆ ಅಂದರೆ ಅದಕ್ಕೆ ಆಧುನಿಕ ರಂಗಭೂಮಿಯು ಕಾರಣವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ಅಗಲವಾದ ರಸ್ತೆ, ಕಟ್ಟಡ, ಮಾಲ್ ಸಹಿತ ಜಿಲ್ಲೆ ಬೆಳೆದಿದೆ. ಆದರೆ, ಜಿಲ್ಲೆಯ ಅಸ್ಮಿತೆ, ಅಸ್ತಿತ್ವಕ್ಕೆ ಇದಷ್ಟೇ ಸಾಲುವುದಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲ ಬೇಕಾಗುತ್ತದೆ. ಇವೆರಡು ಒಟ್ಟಿಗೆ ಸಾಗಿದರೆ ಮಾತ್ರ ಸಹನಾ ಶೀಲ ಜೀವನ ಇರಲು ಸಾಧ್ಯ. ಕಾಲೇಜಿನಲ್ಲಿ ವಿದ್ಯೆ ಮಾತ್ರ ದೊರೆಯ ಬಹುದು. ವೃತ್ತಿ ಜೀವನದಲ್ಲಿ ಸಂಪರ್ಕ ಕೌಶಲ, ನಾಯಕತ್ವ, ನಿರ್ವಹಣಾ ಕೌಶಲ ಬೇಕಾದರೆ ರಂಗಚಟುವಟಿಕೆ ಅಗತ್ಯ ಎಂದರು.
ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್‌ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಲೋಗೊ ಬಿಡುಗಡೆ ಮಾಡಿದರು. ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್.ಭಟ್ ವಂದಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.
ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಎಂ.ಎಲ್.ಸಾಮಗ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಉಪಸ್ಥಿತರಿದ್ದರು. ಬಳಿಕ ಅಟ್ಟಮಟ್ಟಾ ಬೇಸಿಗೆ ಶಿಬಿರ ವಿದ್ಯಾರ್ಥಿಗಳಿಂದ ಎರಡು ನಾಟಕಗಳು ಪ್ರದರ್ಶನಗೊಂಡವು.






