ಮಲ್ಪೆ: ಅಕ್ರಮ ವಾಣಿಜ್ಯ ಸಿಲಿಂಡರ್ ವಶ

ಸಾಂದರ್ಭಿಕ ಚಿತ್ರ
ಮಲ್ಪೆ, ಜೂ.4: ಮಲ್ಪೆಯ ಸನತ್ ಕಾಮತ್ ಎಂಬವರು ಅಕ್ರಮವಾಗಿ ಅನಿಲ ಸಿಲಿಂಡರ್ಗಳನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕರಾದ ಹಿತೇಶ್ ಯು.ಇ. ಅವರು ಬುಧವಾರ ಬೆಳಗ್ಗೆ ಕೊಡವೂರು ಗ್ರಾಮದ ಮಲ್ಪೆ ಜಂಕ್ಷನ್ ಬಳಿ ಇರುವ ಸನತ್ ಕಾಮತ್ ಅವರ ಮನೆಗೆ ದಾಳಿ ನಡೆಸಿ ಪರಿಶೀಲಿಸಿದಾಗ ವಾಣಿಜ್ಯ ಸಿಲಿಂಡರ್ಗಳನ್ನು ಪರವಾನಿಗೆ ಇಲ್ಲದೇ ದಾಸ್ತಾನು ಇರಿಸಿದ್ದು ಪತ್ತೆಯಾಗಿದೆ.
ಪರಿಶೀಲನೆ ನಡೆಸಿದಾಗ ಅವರು ಅಲ್ಲಿ 19 ಕೆ.ಜಿ.ಯ 12 ವಾಣಿಜ್ಯ ಸಿಲಿಂಡರ್ ಹಾಗೂ 5ಕೆ.ಜಿ.ಯ 9 ವಾಣಿಜ್ಯ ಸಿಲಿಂಡರ್ಗಳು ಇರುವುದು ಪತ್ತೆಯಾಗಿದೆ. ಇದನ್ನು ಮೀನುಗಾರಿಕಾ ಉದ್ದೇಶಕ್ಕಾಗಿ ಬಳಸುವವರಿಗೆ ಮಾರಾಟ ಮಾಡಲು ದಾಸ್ತಾನು ಇರಿಸಿದ್ದಾಗಿ ಸನತ್ ಕಾಮತ್ ತಿಳಿಸಿದರು. ಇದಕ್ಕೆ ಯಾವುದೇ ಪರವಾನಿಗೆ ಅಥವಾ ದಾಖಲೆ ಇಲ್ಲದ ಕಾರಣ ಎಲ್ಲಾ ಅನಿಲದ ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story




