ಉಡುಪಿ: ಸಂತೆಕಟ್ಟೆ ಅಂಡರ್ ಪಾಸ್ ಪೂರಕ ಕಾಮಗಾರಿ ಬಗ್ಗೆ ಪರಿಶೀಲನೆ

ಉಡುಪಿ, ಜೂ.5: ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಅಂಡರ್ ಪಾಸ್ ಬಸ್ ಶೆಲ್ಟರ್ ಸಹಿತ ಪೂರಕ ಕಾಮಗಾರಿ ಗಳ ಬಗ್ಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿ ಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಆರಂಭವಾಗಿದ್ದು, ಇನ್ನೂ ಹಲವಾರು ಪೂರಕ ಕಾಮಗಾರಿಗಳು ನಡೆಯಬೇಕಾಗಿದೆ. ಹೆದ್ದಾರಿಯ ಎರಡು ಬದಿಯಲ್ಲಿ ಬಸ್ ನಿಲ್ದಾಣ, ಶೌಚಾಲಯ, ಅಂಡರ್ ಪಾಸ್ ಸೇತುವೆ ಮೇಲೆ ಡಿವೈಡರ್ ಅಳವಡಿಕೆ, ತಡೆಗೋಡೆ ನಿರ್ಮಾಣ, ಸಂತೆಕಟ್ಟೆ ನೇಜಾರು ತಿರುವಿನಲ್ಲಿ ವೃತ್ತ ನಿರ್ಮಾಣ, ಎರಡೂ ಬದಿಯ ಸರ್ವೀಸ್ ರಸ್ತೆ ಆರಂಭಗೊಳ್ಳುವಲ್ಲಿ ಅಗಲೀಕರಣ, ಸರ್ವೀಸ್ ರಸ್ತೆಯ ಸುರಕ್ಷತಾ ಬೇಲಿ ವಿಸ್ತರಣೆ, ಸರ್ವೀಸ್ ರಸ್ತೆಯ ಬದಿಯಲ್ಲಿ ಇಂಟರ್ಲಾಕ್ ಅಳವಡಿಕೆ, ಆಶೀರ್ವಾದ್ ಲಕ್ಷ್ಮೀನಗರ ಜಂಕ್ಷನ್ ಅಗಲೀಕರಣ, ದಾರಿದೀಪ ಸಹಿತ ವಾಹನಗಳ ಸುಗಮ ಸಂಚಾರ, ಪಾದಚಾರಿಗಳ ಸುರಕ್ಷತಾ ದೃಷ್ಟಿಯಿಂದ ಅಗತ್ಯ ಕ್ರಮಗಳ ಬಗ್ಗೆ ತಕ್ಷಣ ಕ್ರಮ ವಹಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಂದಾಪುರ ಭಾಗಕ್ಕೆ ತೆರಳುವ ಎಕ್ಸ್ ಪ್ರೆಸ್ ಬಸ್ಸುಗಳು ಸಂತೆಕಟ್ಟೆ ಜಂಕ್ಷನ್ ಗೆ ಬಾರದೆ ನೇರವಾಗಿ ಸಂಚರಿಸುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಬಸ್ಸುಗಳು ಸರ್ವೀಸ್ ರಸ್ತೆಯ ಮೂಲಕ ಸಂಚರಿಸುವಂತೆ ಕ್ರಮ ವಹಿಸು ವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾ ಪ್ರಸಾದ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರಾದ ಉಮೇಶ್ ಶೆಟ್ಟಿ, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ಉದಯ, ಚಿನ್ಮಯ ಮೂರ್ತಿ, ರಾಮ ಪೂಜಾರಿ, ಪ್ರಸಾದ್ ರಾವ್, ಅಮಿತ್ ಪೂಜಾರಿ, ಬೈಕಾಡಿ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.






