ಆಧುನಿಕ ಜೀವನಶೈಲಿ ಅಗತ್ಯತೆಗಳೇ ಪರಿಸರ ಮಾಲಿನ್ಯಕ್ಕೆ ಕಾರಣ: ನ್ಯಾಯಾಧೀಶ ಎಂ.ಪುರುಷೋತ್ತಮ್

ಉಡುಪಿ, ಜೂ.5: ನಮ್ಮ ಆಧುನಿಕ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಳವಡಿಸಿಕೊಂಡಿರುವ ಆಧುನೀಕರಣ, ವ್ಯಾಪಾರೀಕರಣ, ಕೈಗಾರಿಕೀಕರಣವೂ ಸೇರಿದಂತೆ ಕೆಲವು ಆಚರಣೆಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಪ್ರಕೃತಿಗೆ ಹಾನಿಯಾಗುವ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ್ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ನಗರಸಭೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕೈಗಾರಿಕೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮನುಷ್ಯ ಸಂಕುಲದ ಉಳಿವಿಗೆ ಪ್ರಕೃತಿ ಹಾಗೂ ಜೀವವೈವಿಧ್ಯಗಳು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಾ ಬರುತ್ತಿದೆ. ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ನಿಷ್ಠೆಯಿಂದ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಮನುಷ್ಯ ಬದುಕುವುದಕ್ಕಾಗಿ ಗಾಳಿ, ನೀರು, ಆಹಾರವಸ್ತುಗಳನ್ನು ಉಚಿತವಾಗಿ ಪ್ರಕೃತಿಯಿಂದ ಪಡೆಯುತ್ತಿರುವಾಗ, ಪ್ರಕೃತಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗುತ್ತದೆ. ಪ್ರತೀ ವರ್ಷ ಜೂನ್ 5ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದು ಕೇವಲ ಆಚರಣೆಗೆ ಸೀಮಿತ ವಾಗದೇ, ಪ್ರಕೃತಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಸಂವಿಧಾನದಲ್ಲಿ ಮಾನವನು ಸ್ವತಂತ್ರವಾಗಿ ಜೀವಿಸಲು ಮೂಲ ಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಅದರಂತೆ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಎಂದು ಆರ್ಟಿಕಲ್ 51 (ಎ) (ಜಿ) ತಿಳಿಸುತ್ತದೆ. ಪರಿಸರ ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳು ಜಾಗೃತಿ ಹೊಂದುವುದರೊಂದಿಗೆ, ಇಡೀ ಸಮುದಾಯಕ್ಕೆ ಈ ಬಗ್ಗೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಮಾನವನ ಅತಿಯಾದ ದುರಾಸೆ, ಕೈಗಾರೀಕರಣ ಸೇರಿದಂತೆ ಅಭಿವೃದ್ಧಿಯ ಹೆಸರಿನಲ್ಲಿ ಮಾನವನಿಂದ ಪ್ರಕೃತಿಯ ಮೇಲೆ ಆಗುತ್ತಿರುವ ದೌರ್ಜನ್ಯದಿಂದ ಪರಿಸರ ಮಾಲಿನ್ಯ ತಾರಕಕ್ಕೇರುತ್ತಲೇ ಇದೆ. ಪರಿಸರದ ಮಹತ್ವವನ್ನು ಅರಿತಾಗ ಅದನ್ನು ನಾಶ ಮಾಡಲು ಯಾರೊಬ್ಬರೂ ಮುಂದಾಗುವುದಿಲ್ಲ ಎಂದ ಅವರು, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಅರ್ಥಪೂರ್ಣವಾಗಿ ನಿಭಾಯಿಸಬೇಕಿದೆ ಎಂದರು.
ಕ.ರಾ.ಮಾ.ನಿ.ಮಂ.ಮಂಗಳೂರು ವಿಭಾಗೀಯ ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಬಿ ಪುರಾಣಿಕ್ ಮಾತನಾಡಿ, ಪರಿಸರ ರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಜೂನ್ 5ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನವ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟಿ ಭೂಮಿಯನ್ನು ರಕ್ಷಿಸುವುದು ಆಚರಣೆಯ ಗುರಿಯಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದರು.
ಕ.ರಾ.ಮಾ.ನಿ.ಮಂ. ಪ್ರಾದೇಶಿಕ ಕಚೇರಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಕೀರ್ತಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿದರು.
ಮಣಿಪಾಲ ಎಂ.ಐ.ಟಿ ಯ ಅಧ್ಯಾಪಕರ ಕಲ್ಯಾಣಾಭಿವೃದ್ಧಿ ವಿಭಾಗದ ಸಹ ನಿರ್ದೇಶಕ ಡಾ ರಾಘವೇಂದ್ರ ಕೆ ಹೊಳ್ಳ ವಿಶೇಷ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸ ಲಾದ ಚಿತ್ರಕಲಾಸ್ಪರ್ಧೆ ಹಾಗೂ ರೀಲ್ಸ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ತರಿಸಲಾಯಿತು ಹಾಗೂ ಪರಿಸರಕ್ಕೆ ಪೂರಕವಾಗಿರುವ ಜೂಟ್ ಬ್ಯಾಗುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು.
ಇದಕ್ಕೆಮುನ್ನ ಮಣಿಪಾಲ ಎಂ.ಜೆ.ಸಿ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪರಿಸರ ಜಾಥಾಗೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಪುರುಷೋತ್ತಮ್ ಚಾಲನೆ ನೀಡಿದರು. ಅಲ್ಲದೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಹಿರಿಯ ಸಿವಿಲ್ ನ್ಯಾಯಾಧೀಶ ಎಮ್ ಪುರುಷೋತ್ತಮ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಸಾಂಕೇತಿಕ ಚಾಲನೆ ನೀಡಿದರು.
ಉಪ ಪರಿಸರ ಅಧಿಕಾರಿ ಡಾ.ಅಮೃತ ಎ.ಎಸ್. ಸ್ವಾಗತಿಸಿದರೆ, ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಪರಿಸರ ಇಲಾಖೆಯ ರಾಜೇಶ್ವರಿ ವಂದಿಸಿದರು.






