ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ: ಉಡುಪಿ ಡಿಸಿ ಸ್ವರೂಪ ಟಿ.ಕೆ

ಉಡುಪಿ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಶು ಹೆಚ್ಚಿದ್ದು, ಜನಸಾಮಾನ್ಯರಲ್ಲಿ ರೋಗಗಳ ಹರಡುವಿಕೆ, ಅವುಗಳ ನಿಯಂತ್ರಣದ ಬಗ್ಗೆ ಮುಂಜಾಗ್ರತೆ ಕುರಿತಂತೆ ಆರೋಗ್ಯ ಶಿಕ್ಷಣವನ್ನು ನೀಡಿ ಎಚ್ಚರದಿಂದಿರಲು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸೂಚನೆ ಗಳನ್ನು ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಡೆಂಗಿ/ಮಲೇರಿಯಾ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಂಗಾರು ಮಳೆ ಈಗಾಗಲೇ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ. ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಸಂತಾನೋತ್ಪತಿ ವೃದ್ಧಿಗೊಂಡು, ಮಲೇರಿಯಾ, ಚಿಕನ್‌ಗೂನ್ಯಾ, ಡೆಂಗಿ, ಫೈಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಸಾರ್ವನಿಕರಿಗೆ ಇವುಗಳ ತಡೆಗಟ್ಟುವ ಕುರಿತು ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ, ರೋಗಗಳು ಹರಡದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯ ಸಂಸ್ಥೆ ಗಳು ಹಾಗೂ ಗ್ರಾಮ ಪಂಚಾಯತಿಗಳು ಕಾರ್ಯಪ್ರವೃತ್ತರಾಗುವುದರೊಂದಿಗೆ ಸಮುದಾಯದ ಸಹಭಾಗಿತ್ವದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಜನಸಾಮಾನ್ಯರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಂಡಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಆಗುವಂತೆ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿ ಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆದಲ್ಲಿ ರೋಗರುಜಿನಗಳು ಹರಡಲು ಕಾರಣವಾಗುತ್ತವೆ. ಇದಕ್ಕೆ ಆಸ್ಪದ ನೀಡಬಾರದು. ಸ್ವಚ್ಛ ಪರಿಸರ ವನ್ನು ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಸರಕಾರ ಇದನ್ನು ನೋಡಿಕೊಳ್ಳುತ್ತದೆ ಎಂದು ಉದಾಸೀನತೆ ಮಾಡಬಾರದು ಎಂದರು.
ಸಾಮಾನ್ಯವಾಗಿ ಮುಂಗಾರಿನಲ್ಲಿ ಮಳೆಯು ಬಿಟ್ಟು ಬಿಟ್ಟು ಬಂದಂತಹ ಸಂದರ್ಭದಲ್ಲಿ ಮನೆ ಹಾಗೂ ಕಟ್ಟಡಗಳ ಸುತ್ತಮುತ್ತಲಿನ ಹೊರಾಂಗಣದಲ್ಲಿ ಘನತ್ಯಾಜ್ಯ ಅನುಪಯುಕ್ತ ವಸ್ತುಗಳಲ್ಲಿ ಟೈರುಗಳಲ್ಲಿ, ಎಳನೀರಿನ ಚಿಪ್ಪು ಸೇರಿ ದಂತೆ ಮತ್ತಿತರ ಸ್ಥಳಗಳಲ್ಲಿ ನೀರು ಶೇಖರಣೆಗೊಂಡು ಆ ಸ್ಥಳಗಳಲ್ಲಿ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳ ಉತ್ರತ್ತಿಯಾಗುವ ತಾಣಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಮುಂದಾಗಬೇಕು. ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಒಂದೊಮ್ಮೆ ಇವುಗಳನ್ನು ಉಲ್ಲಂಘಿಸಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಳೆದ ನಾಲ್ಕೈದು ವರ್ಷಗಳಲ್ಲಿ ಡೆಂಗಿ, ಚಿಕೂನ್‌ಗೂನ್ಯಾ, ಮಲೇರಿಯಾ ರೋಗಗಳು ನಗರ ಪ್ರದೇಶಗಳಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿವೆ. ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳು ಮಳೆಗಾಲದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಸ್ವಯಂಸೇವಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳು ಮನೆಮನೆಗೆ ಭೇಟಿ ನೀಡಿ, ಸೊಳ್ಳೆಗಳ ಸಂತಾನೋತ್ಪತ್ತಿ ತಾಣ ಗಳನ್ನು ನಿರ್ಮೂಲನೆಗೊಳಿಸುವುದರೊಂದಿಗೆ, ಸಾಂಕ್ರಾಮಿಕ ರೋಗಗಳು ಹರಡದಂತೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡಬೇಕು ಎಂದರು.
ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕಾರ್ಮಿಕರು ಉದ್ಯೋಗವನ್ನು ಅರಸಿ ಜಿಲ್ಲೆಗೆ ಆಗಮಿಸುತ್ತಾರೆ. ಅವರಿಂದಲೂ ಸಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ನಿಯಂತ್ರಣಕ್ಕೆ ಕಟ್ಟಡ ನಿರ್ಮಾಣ ಸಂಸ್ಥೆಗಳು ಹಾಗೂ ಕಾರ್ಮಿಕ ಗುತ್ತಿಗೆದಾರರ ಸಭೆಯನ್ನು ನಗರಸಭೆಯ ಆಯುಕ್ತರು ಕರೆದು ಅವರಿಗೂ ಸಹ ಇವುಗಳ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಕಾರ್ಮಿಕರ ಆರೋಗ್ಯ ತಪಾಸಣೆಗೂ ಒತ್ತು ನೀಡಬೇಕು ಎಂದರು.
ಜಿಲ್ಲೆಯ ಎಲ್ಲಾ ವಿದ್ಯಾರ್ಥಿನಿಲಯ, ಶಾಲಾ-ಕಾಲೇಜು, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅರಿವು ಮೂಡಿ ಸುವ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ಆಯೋಜಿಸಬೇಕು ಎಂದ ಅವರು, ಕಲ್ಲು ಕ್ವಾರಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಚಿಕ್ಕ ಚಿಕ್ಕ ತಾತ್ಕಾಲಿಕ ಕ್ವಾರಿಗಳಲ್ಲಿ ಔಷಧಿ ಸಿಂಪಡಿಸಿ ಲಾರ್ವಾ ಉತ್ಪತ್ತಿಯಾಗದಂತೆ ಕ್ರಮವಹಿಸಬೇಕೆಂದರು.
ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.
ಬಂದರು ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ
ಜಿಲ್ಲೆಯ ಬಂದರು ಪ್ರದೇಶಗಳಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ಜೊತೆಗೆ ಪರಿಸರದಲ್ಲಿ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಮೀನುಗಾರಿಕೆ ಚಟುವಟಿಕೆಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಬೋಟುಗಳು ನಿಲುಗಡೆ ಯಾಗಿದ್ದು, ಅಲ್ಲಿನ ಟ್ಯಾಂಕ್‌ಗಳು ಹಾಗೂ ಬದಿಯಲ್ಲಿ ಅಳವಡಿಸಿರುವ ಟೈರುಗಳಲ್ಲಿ ಮಳೆಯ ನೀರು ನಿಂತು ಸೊಳ್ಳೆ ಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತವೆ. ಈ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬಂದರು ಮತ್ತು ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತೋಟಗಾರಿಕೆ ಬೆಳೆಗಳಾದ ಅಡಿಕೆಯ ಹಾಳೆಗಳು, ಅನಾನಸ್‌ನ ಎಲೆಗಳ ಸಂಧಿಗಳಲ್ಲಿ ಹಾಗೂ ರಬ್ಬರ್ ಸಂಗ್ರಹದ ಟಬ್‌ಗಳಲ್ಲಿಯೂ ಸಹ ಮಳೆಯ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರವಾಗಿರುತ್ತದೆ. ಈ ಬಗ್ಗೆಯೂ ಸಹ ಎಚ್ಚರವಹಿಸುವಂತೆ ರೈತರಲ್ಲಿ, ಬೆಳೆಗಾರರಲ್ಲಿ ಅರಿವು ಮೂಡಿಸಬೇಕು ಎಂದರು.






