ಪ್ರತಿಯೊಬ್ಬರಿಗೂ ಕಾನೂನು ಅರಿವಿನ ಅಗತ್ಯತೆಯಿದೆ: ನ್ಯಾ. ಅಬ್ದುಲ್ ರಹೀಂ

ಕುಂದಾಪುರ, ಜೂ.6: ಮನುಷ್ಯ ತನ್ನ ಮೇಲೆ ಹತೋಟಿ ಸಾಧಿಸುವ ಸಲುವಾಗಿ ದುರಾಲೋಚನೆಯಿಂದ ಕಂಡು ಕೊಂಡ ಸೊಪ್ಪು ಮೊದಲಾದ ಉತ್ಪನ್ನಗಳು ಇಂದು ಮಾನವ ಕುಲಕ್ಕೆ ಕಂಟಕವಾಗುತ್ತಿದೆ. ತಂಬಾಕು ಮನುಷ್ಯನ ದೇಹದ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ ಸಮಾಜ ವನ್ನು ಅಸ್ಥಿರಗೊಳಿಸುತ್ತದೆ. ವಿದ್ಯಾರ್ಥಿಗಳು ಇಂತಹ ವ್ಯಸನಕ್ಕೆ ಬಲಿಯಾಗಬಾರದು ಎಂದು ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದ್ದಾರೆ.
ವಿಶ್ವ ತಂಬಾಕು ನಿಷೇಧ ದಿನಾಚರಣೆಯ ಪ್ರಯುಕ್ತ ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾ ಪುರ ವಕೀಲರ ಸಂಘ, ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ ಮತ್ತು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಜ್ಯೂನಿಯರ್ ಕಾಲೇಜ್ ಆವರಣದ ರೋಟರಿ ಕಲಾಮಂದಿರದಲ್ಲಿ ಜೂ.6ರಂದು ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ದೇಶದ ಭವ್ಯ ಭವಿಷ್ಯದ ಹರಿಕಾರರಾದ ಯುವ ಜನತೆ ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಶಿಕ್ಷಣ, ಉದ್ಯೋಗ, ಸಮಾಜಮುಖಿ ಚಿಂತನೆಗಳತ್ತ ತಮ್ಮ ಗಮನ ಕೇಂದ್ರೀಕರಿಸಬೇಕು. ಉನ್ನತ ಸಾಧನೆ ಮಾಡುವ ಮೂಲಕ ತಮ್ಮ ಕುಟುಂಬ, ಊರು, ದೇಶದ ಪ್ರಗತಿಗೆ ಕೊಡುಗೆ ನೀಡಬೇಕು. ಮಾನವ ಜೀವನಕ್ಕೆ ಹಾನಿಯಾದ ಇಂತಹ ವಸ್ತುಗಳ ಮಾರಾಟ, ಬಳಕೆ ನಿಷೇಧದ ಕುರಿತು ತಂಬಾಕು ನಿಷೇಧ ಕಾಯ್ದೆಯಡಿ ಈಗಾಗಲೇ ವಿವಿಧ ಇಲಾಖೆಗಳು ಕಾರ್ಯಾಚರಿಸುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಕಾನೂನು ಅರಿವಿನ ಅಗತ್ಯತೆಯಿದೆ ಎಂದರು.
ಕುಂದಾಪುರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಇಂದಿರಾ ನಾಯ್ಕ ಮಾತನಾಡಿ, ನಕರಾತ್ಮಕ ವಿಚಾರಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಕೆಟ್ಟ ಪ್ರಚೋದನೆ ನೀಡುವ ಸ್ನೇಹಿತರಿಂದ ದೂರವಿದ್ದು ಪುಸ್ತಕಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡು, ಅಗತ್ಯವಿದ್ದಲ್ಲಿ ನಮಗೆ ನಾವೇ ಗುರು, ಮಾರ್ಗರ್ಶಕರಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದರು.
ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮಾತನಾಡಿ, ತಂಬಾಕು ಸೇವನೆಯಿಂದ ಅಲ್ಪಾವಧಿಯಲ್ಲಿ ಜೀವನ ಕಳೆದುಕೊಳ್ಳುವ ಸಂಭವ ಜಾಸ್ತಿ. ಯುವಜನತೆ ಇಂತಹ ವ್ಯಸನಕ್ಕೆ ಬಲಿಯಾಗಬಾರದು. ಸರಕಾರ, ಇಲಾಖೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ತಂಬಾಕು ಮುಕ್ತ ದೇಶ ನಿರ್ಮಾಣಕ್ಕೆ ಯುವಪೀಳಿಗೆ ಕೈಜೋಡಿಸಬೇಕು. ಸ್ವಸ್ಥ ಸಮಾಜಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.
ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಕೆ. ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ತಂಬಾಕು ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.
ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ, ಕುಂದಾಪು ವಕೀಲರ ಸಂಘದ ಅಧ್ಯಕ್ಷ ಜೆ. ಶ್ರೀನಾಥ ರಾವ್, ಪ್ರಧಾನ ಕಾರ್ಯದರ್ಶಿ ಪಿ. ಜಯಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಧ್ಯಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡಸ್ವಾಗತಿಸಿ, ಸಂಚಾರ ಠಾಣೆ ಪಿಎಸ್‌ಐ ಅನೂಪ್ ನಾಯಕ್ ವಂದಿಸಿದರು.






