ಉಡುಪಿ: ಬಿರುಸು ಪಡೆಯದ ಮುಂಗಾರು

ಉಡುಪಿ, ಜೂ.10: ಮುಂಗಾರು ಜಿಲ್ಲೆಗೆ ಕಾಲಿರಿಸಿ ಕೆಲವು ದಿನಗಳು ಕಳೆದರೂ ಮಳೆ ಇನ್ನೂ ಬಿರುಸು ಪಡೆದು ಕೊಂಡಿಲ್ಲ. ದಿನವಿಡೀ ಸಾಧಾರಣ ಮಳೆ ಇಂದೂ ಮುಂದುವರಿದಿದ್ದು, ಹಗಲಿನಲ್ಲಿ ಮಳೆ ವಿಶ್ರಾಂತಿ ಪಡೆದು ಸಂಜೆಯ ಬಳಿಕ ಅಲ್ಲಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಸುರಿಯುತ್ತಿದೆ.
ಗಾಳಿ-ಮಳೆಯಿಂದ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾದ ಪ್ರಕರಣ ವರದಿಯಾಗಿದೆ. ಬೈಂದೂರು ತಾಲೂಕು ಕಂಬದಕೋಣೆಯ ಚಂದು ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಅದೇ ರೀತಿ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಸುಧಾಕರ ಪೂಜಾರಿ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಳ ಗಾಗಿದ್ದು 40,000ದಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 17.7ಮಿ.ಮೀ. ಮಳೆಯಾಗಿದೆ.ಕಾರ್ಕಳದಲ್ಲಿ 28.4, ಕಾಪುವಿನಲ್ಲಿ 22.0, ಬ್ರಹ್ಮಾವರದಲ್ಲಿ 20.4, ಹೆಬ್ರಿಯಲ್ಲಿ 17.1, ಕುಂದಾಪುರದಲ್ಲಿ 13.4 ಹಾಗೂ ಬೈಂದೂರಿ ನಲ್ಲಿ 5.2ಮಿ.ಮೀ. ಮಳೆಯಾದ ವರದಿ ಬಂದಿದೆ.
ಹವಾಮಾನ ಇಲಾಖೆ ಇಂದು ಸಹ ಮೀನುಗಾರರಿಗೆ ಮುನ್ನೆಚ್ಚರಿಕೆಯನ್ನು ನೀಡಿದೆ. ಜೂ.13ರವರೆಗೆ ಅರಬಿ ಸಮುದ್ರದಲ್ಲಿ ಗಂಟೆಗೆ 45ರಿಂದ 55ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ತಿಳಿಸಿದೆ.






