ಉಡುಪಿ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಮಹಿಳಾ ಸ್ನೇಹಿಗೊಳಿಸಿ: ಜನವಾದಿ ಮಹಿಳಾ ಸಂಘಟನೆಯಿಂದ ಮನವಿ

ಉಡುಪಿ, ಜೂ.11:ಶುದ್ಧೀಕರಣದ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿ ರುವ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಇದೀಗ ಜೂನ್ 30ರಿಂದ ಉಡುಪಿ ಜಿಲ್ಲೆಯಲ್ಲೂ ಪ್ರಾರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಪ್ರಕ್ರಿಯೆಯನ್ನು ಮಹಿಳಾ ಸ್ನೇಹಿಯಾಗಿ ನಡೆಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಅವರಿಗೆ ಮನವಿಯ ಮೂಲಕ ಒತ್ತಾಯಿಸಿದೆ.
ಮತದಾರರ ತೀವ್ರ ಪರಿಷ್ಕರಣೆಯನ್ನು ಈ ಹಿಂದೆ ಪ್ರಜಾಪ್ರಭುತ್ವದ ಮೂಲ ಲಕ್ಷಣದ ಅನುಸಾರ ಒಳಗೊಳ್ಳುವ ನಿಟ್ಟಿ ನಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಶುದ್ಧೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಬದಲು ಹೊರತಳ್ಳುವ ಸಂಖ್ಯೆ ಗಾಬರಿ ಹುಟ್ಟಿಸುವಂತಿದ್ದು, ಅದರಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿರುವುದು ಆತಂಕಕಾರಿ ಸಂಗತಿ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಬಿಹಾರದಲ್ಲಿ ಕೈಬಿಟ್ಟ ಮತದಾರರಲ್ಲಿ ಶೇ.60ರಷ್ಟು -22.70ಲಕ್ಷ ಮಂದಿ- ಮಹಿಳೆಯರು, ಮಧ್ಯಪ್ರದೇಶದಲ್ಲಿ 23.60 ಲಕ್ಷ ಮಹಿಳೆಯರಿದ್ದು, ಇದು ಪುರುಷರ ಸಂಖ್ಯೆಗಿಂತ ಐದು ಲಕ್ಷ ಅಧಿಕ. ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಪ್ರಮಾಣ ತೀರಾ ಆತಂಕಕಾರಿ ಮಟ್ಟದಲ್ಲಿದೆ ಎಂಬ ಮಾಹಿತಿ ಆತಂಕಕಾರಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಜಿಲ್ಲೆಯಲ್ಲಿ ಜೂ.30ರಿಂದ ಪ್ರಾರಂಭಗೊಳ್ಳುವ ಎಸ್‌ಐಆರ್ ವೇಳೆ ಅಸಂಗತ ವಿವರ, ತಾರ್ಕಿಕ ವ್ಯತ್ಯಾಸ ಗಳನ್ನು ಅಳವಡಿಸಬಾರದು, ಮಹಿಳೆಯರು ಶಿಕ್ಷಣ ವಂಚಿತರಾಗಿರುವುದರಿಂದ ಅವರಿಗೆ ಅಗತ್ಯ ದಾಖಲೆ ಒದಗಿಸ ಬೇಕು, ದೊಡ್ಡ ಸಂಖ್ಯೆಯಲ್ಲಿ ಬಾಲ್ಯವಿವಾಹಿತ ಮಹಿಳೆಯರಿರುವು ದರಿಂದ 15-45 ವರ್ಷಗಳ ಮಾನದಂಡ ಅಳವಡಿಸಬಾರದು. ವಲಸಿಗರು ಇಲ್ಲಿ ಭಾರೀ ಸಂಖ್ಯೆಯಲ್ಲಿರುವುದರಿಂದ ಅವರಿಗೆ ರಕ್ಷಣೆ ಒದಗಿಸಬೇಕು.
ಜಿಲ್ಲಾಡಳಿತ ಅಗತ್ಯವಿರುವವರಿಗೆ ವಾಸಸ್ಥಾನ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬ ರಿಜಿಸ್ಟರ್ ಪತ್ರಗಳನ್ನು ಒದಗಿಸಲು ವ್ಯವಸ್ಥೆ ಮಾಡಬೇಕು. ಯಾವ ಕಾರಣಕ್ಕೂ ಜಾತಿ, ಧರ್ಮ ಕುರಿತು ಪಕ್ಷಪಾತಿ ಧೋರಣೆ ತೋರದಂತೆ ಎಚ್ಚರ ವಹಿಸಬೇಕು. ಅಂತರ್ಜಾತಿ, ಅಂತರಧರ್ಮೀಯ ವಿವಾಹಿತರಿಗೆ ಜಿಲ್ಲಾಡಳಿತ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕು.
ವಿವಿಧ ರಾಜ್ಯಗಳಲ್ಲಿ ಆದಂತೆ ಬಿಎಲ್‌ಒಗಳ ಮೇಲೆ ಕೆಲಸದ ಒತ್ತಡ, ಅನಗತ್ಯ ರಾಜಕೀಯ ಒತ್ತಡ ಹೇರಿ ಅವರು ಆತ್ಮಹತ್ಯೆಗೆ ಮುಂದಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರು ನಿಯೋಗದ ಮನವಿ ಸ್ವೀಕರಿಸಿದರು. ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಕುಂದಾಪುರ ಮುಖಂಡರಾದ ಬಲ್ಕೀಸ್, ಕಾರ್ಕಳ ಮುಖಂಡರಾದ ಸುನೀತಾ ಶೆಟ್ಟಿ ಬೈಂದೂರು, ಮುಖಂಡರಾದ ಶೋಭಾ, ನಾಗರತ್ನ ನಾಡ, ಉಡುಪಿ ಮುಖಂಡರಾದ ನಳಿನಿ ಎಸ್. ಉಪಸ್ಥಿತರಿದ್ದರು.






