ಪುರಸಭೆಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಡುಪಿ ಜಿಲ್ಲಾಧಿಕಾರಿ ಭೇಟಿ

ಕುಂದಾಪುರ: ತಾಲೂಕಿನ ಕಂದಾವರದಲ್ಲಿರುವ ಇಲ್ಲಿನ ಪುರಸಭೆಯ ಘನ ತ್ಯಾಜ್ಯ ನಿರ್ವಹಣ ಘಟಕಕ್ಕೆ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.
ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ನಡೆಯುತ್ತಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಯ ಕಾಮಗಾರಿ, ನೂತನವಾಗಿ ನಿರ್ಮಾಣಗೊಂಡಿರುವ ಮೆಟೀರಿಯಲ್ ರಿಕವರಿ ಫೆಸಿಲಿಟಿ ಕಾರ್ಯವೈಖರಿ ಹಾಗೂ ಗೊಬ್ಬರ ತಯಾರಿಕಾ ಘಟಕ, ಸ್ಯಾನಿಟರಿ ಲ್ಯಾಂಡ್ ಫೀಲ್ ಸೆಲ್, ಬೈಲಿಂಗ್ ಘಟಕಗಳನ್ನು ಅವರು ಈ ಸಂದರ್ಭದಲ್ಲಿ ವೀಕ್ಷಿಸಿದರು.
ಬಳಿಕ ಕೋಡಿ ಎಂಕೊಡಿ ಬೀಚ್ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಪ್ರತಿ 25 ಮೀ.ಗಳಿಗೊಂದು ಡಸ್ಟ್ ಬಿನ್ ಗಳನ್ನು ಸ್ಥಳೀಯ ಸಹಕಾರದೊಂದಿಗೆ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಅಮೃತಾ, ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಅರುಣ್, ಪುರಸಭೆಯ ಮುಖ್ಯ ಅಧಿಕಾರಿ ಆನಂದ್, ಪರಿಸರ ಇಂಜಿನಿಯರ್ ಗುರುಪ್ರಸಾದ್, ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.






