ವಂಡಾರಿನ ಶ್ರೀಕೃಷ್ಣಪ್ರಸಾದ್ ಫೌಂಡೇಷನ್‌ನಿಂದ ಏಕಪೋಷಕ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ನೆರವು

ಉಡುಪಿ, ಜೂ.12: ದೇಶದ ಪ್ರಮುಖ ಗೋಡಂಬಿ ಸಂಸ್ಕರಣಾ ಸಂಸ್ಥೆಗಳಲ್ಲಿ ಒಂದಾಗಿರುವ ಬ್ರಹ್ಮಾವರ ತಾಲೂಕಿನ ವಂಡಾರಿನಲ್ಲಿರುವ ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಪ್ರೈವೆಟ್ ಲಿ.ನ್ನು ನಡೆಸುವ ಶ್ರೀಕೃಷ್ಣಪ್ರಸಾದ್ ಸಮೂಹ ಸಂಸ್ಥೆಗಳು ಶ್ರೀಕೃಷ್ಣಪ್ರಸಾದ್ ಫೌಂಡೇಷನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದ ಹಾಗೂ ಏಕಪೋಷಕ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸಂಪೂರ್ಣ ನೆರವು ನೀಡುತ್ತಿದೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಸುಹಾಸನ ಶೆಟ್ಟಿ ಹಾಗೂ ಸೇಲ್ಸ್ ಜನರಲ್ ಮ್ಯಾನೇಜರ್ ಶ್ರೀನಿವಾಸ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈವರೆಗೆ ಇಂಥ 14 ಮಕ್ಕಳನ್ನು ಗುರುತಿಸಿ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚುಗಳನ್ನು ಫೌಂಡೇಷನ್ ವತಿಯಿಂದ ನೀಡಲಾಗುತ್ತಿದೆ ಎಂದರು. ಅಲ್ಲದೇ ಪ್ರತಿವರ್ಷ ಕನಿಷ್ಠ 10 ಮಂದಿ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ ಎಂದರು.
2024ರಲ್ಲಿ ಸ್ಥಾಪಿತವಾದ ಶ್ರೀಕೃಷ್ಣಪ್ರಸಾದ್ ಪೌಂಡೇಷನ್ ಶಿಕ್ಷಣ, ಆರೋಗ್ಯ, ಕಲೆ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿ ವೇತನ, ವೈದ್ಯಕೀಯ ಸಹಾಯ, ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಸೇರಿದಂತೆ ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಹಲವರ ಬದುಕಿಗೆ ಆಶಾಕಿರಣವಾಗಿದೆ ಎಂದರು.
ಶ್ರೀಕೃಷ್ಣಪ್ರಸಾದ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಂಪತ್ ಶೆಟ್ಟಿ ಅವರ ನೇತೃತ್ವದಲ್ಲಿ ಉದ್ಯಮದಲ್ಲಿ ಯಶಸ್ಸಿ ನೊಂದಿಗೆ ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ ಎಂದರು.
ಇದೀಗ ಸಂಸ್ಥೆಯ ಸುಮಾರು ಮೂರು ಸಾವಿರ ಸಿಬ್ಬಂದಿಗಳ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮ ‘ಸಂಕಲ್ಪ’ ಇದೇ ಜೂ.14ರ ಬೆಳಗ್ಗೆ 10 ಗಂಟೆಯಿಂದ ಕುಂದಾಪುರದ ಯುವ ಮೆರಿಡಿಯನ್‌ನಲ್ಲಿ ನಡೆಯಲಿದೆ ಎಂದು ಶ್ರೀನಿವಾಸ್ ತಿಳಿಸಿದರು.
ಇದರಲ್ಲಿ ಸಂಕಲ್ಪ ಕಾರ್ಯಕ್ರಮದ ಜೊತೆಗೆ ಏಕಪೋಷಕ ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಗಳು, ಸಂಸ್ಥೆಯ ಉದ್ಯೋಗಿಗಳ ಮಕ್ಕಳು, ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ವೈದ್ಯಕೀಯ ನೆರವು ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 93 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನೆರವು ವಿತರಣೆಯಾಗಲಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್‌ಕುಮಾರ್ ಕೊಡ್ಗಿ ಅಲ್ಲದೇ ಉದ್ಯಮಿ ಗಳಾದ ಬಿ.ಉದಯಕುಮಾರ್ ಶೆಟ್ಟಿ, ಬಿ.ವಿನಯಕುಮಾರ್ ಶೆಟ್ಟಿ, ಡಾ.ಉಮೇಶ ಶೆಟ್ಟಿ ಕೊತ್ತಾಡಿ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಎಚ್‌ಆರ್ ಜನರಲ್ ಮ್ಯಾನೇಜರ್ ಚಂದ್ರಶೇಖರ್,ಎಚ್‌ಆರ್ ಮ್ಯಾನೇಜರ್ ವಿನಯಾ ಶೆಟ್ಟಿ ಉಪಸ್ಥಿತರಿದ್ದರು.






