ವಿಶ್ವ ರಕ್ತದಾನಿಗಳ ದಿನಾಚರಣೆ | ಉಡುಪಿ ರಾಜ್ಯದ ರಕ್ತದಾನಿಗಳ ಜಿಲ್ಲೆ: ಬಿ.ರಾಜೀವ ಶೆಟ್ಟಿ

ಉಡುಪಿ, ಜೂ.15: ಉಡುಪಿ ಜಿಲ್ಲೆಯಲ್ಲಿ ಸಾವಿರಾರು ರಕ್ತದಾನಿಗಳಿದ್ದಾರೆ. ಅವರಿಂದಾಗಿ ಜಿಲ್ಲೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವವನ್ನು ಪಡೆದಿದೆ. ಇಂದು ಉಡುಪಿ ಜಿಲ್ಲೆ ರಾಜ್ಯದಲ್ಲೇ ರಕ್ತದಾನಿಗಳ ಜಿಲ್ಲೆ ಎಂದು ಗುರುತಿಸಲ್ಪ ಡುತ್ತಿದೆ ಎಂದು ಕರ್ನಾಟಕ ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆಯು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರಕ್ತನಿಧಿ ಕೇಂದ್ರ ಕುಂದಾಪುರ ಮತ್ತು ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರ ಉಡುಪಿ ಸಹಯೋಗದಲ್ಲಿ ಸೋಮವಾರ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತಾನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುಂದಾಪುರ ರೆಡ್‌ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಮಾತನಾಡಿ, ಸದ್ಯ ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆ ಇದ್ದು, ರಕ್ತದಾನದ ಕುರಿತಂತೆ ಯುವಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ ಅವರು ರಕ್ತದಾನದ ಮಹತ್ವ, ಅದರ ಅಗತ್ಯತೆ, ಅದರಿಂದ ರಕ್ತದಾನಿಗಿರುವ ಪ್ರಯೋಜನದ ಕುರಿತು ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಲವು ಸಲ ತುರ್ತುಸಂದರ್ಭಗಳಲ್ಲಿ ರಕ್ತದಾನ ಮಾಡಿ ಅಮೂಲ್ಯ ಜೀವ ಉಳಿಸಿದ ಜಿಲ್ಲೆಯ ರಕ್ತದಾನಿಗಳಾದ ಸುಕನ್ಯಾ ಎಂ. ಕಳಸ, ಅಕ್ಷತ್ ನಾಯಕ್, ವಿಶ್ವನಾಥ ನಾಯಕ್, ರಘುರಾಮ್, ಶಿವಕುಮಾರ್ ಶೆಟ್ಟಿಗಾರ್ ಮತ್ತು ರಮೇಶ್ ಕರ್ಕೇರ ಅವರನ್ನು ಜಿಲ್ಲಾ ರೆಡ್‌ಕ್ರಾಸ್ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಸುಕನ್ಯ ಎಂ. ಕಳಸ ಮತ್ತು ಶಿವಕುಮಾರ್ ಶೆಟ್ಟಿಗಾರ್ ಅವರು ರಕ್ತದಾನದ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಜಿಲ್ಲಾ ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ, ಆಡಳಿತ ಮಂಡಳಿಯ ಸದಸ್ಯ ಟಿ. ಚಂದ್ರಶೇಖರ್ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಸ್ವಾಗತಿಸಿದರೆ, ರೆಡ್‌ಕ್ರಾಸ್ ಸದಸ್ಯ ಪ್ರೊ.ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು. ರೆಡ್‌ಕ್ರಾಸ್ ಖಚಾಂಚಿ ರಮಾದೇವಿ ವಂದಿಸಿದರು.






