ಕೈಗಾರಿಕಾ ತರಬೇತಿ ಸಂಸ್ಥೆಗಳು ಸ್ಥಳೀಯರಿಗೆ ವೃತ್ತಿಪರ ಕೌಶಲ್ಯ ತರಬೇತಿ ನೀಡಲಿ: ಉಡುಪಿ ಡಿಸಿ ಸ್ವರೂಪ ಟಿ.ಕೆ. ಸಲಹೆ

ಉಡುಪಿ : ಜಿಲ್ಲೆಯಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳು ಪ್ರಸ್ತುತ ಇರುವ ಕೈಗಾರಿಕಾ ಘಟಕಗಳಲ್ಲಿ ವೃತ್ತಿ ಯನ್ನು ಕೈಗೊಳ್ಳಲು ಅಗತ್ಯವಿರುವ ವೃತ್ತಿಪರ ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಯುವಜನತೆ ಉದ್ಯೋಗ ಪಡೆಯಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕಾ ಸ್ಪಂದನ ಹಾಗೂ ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೈಗಾರಿಕೆಗಳ ಸ್ಥಾಪನೆಯಿಂದ ರಾಜ್ಯದ ಆರ್ಥಿಕ ಪ್ರಗತಿ ಸಾಧ್ಯವಾಗುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ಲಭ್ಯವಾಗುತ್ತವೆ. ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಘಟಕಗಳು ಸ್ಥಾಪನೆ ಯಾದಲ್ಲಿ ಇಲ್ಲಿನವರಿಗೆ ಉದ್ಯೋಗಗಳು ದೊರೆಯುತ್ತವೆ. ಇದರಿಂದ ಉದ್ಯೋಗವನ್ನು ಅರಸಿ ಹೊರ ಜಿಲ್ಲೆಗೆ ತೆರಳು ವುದು ಕಡಿಮೆಯಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲಸೌಕರ್ಯ ಗಳನ್ನು ನೀಡಲು ಹೆಚ್ಚು ಒತ್ತು ನೀಡಬೇಕು ಎಂದರು.
ತರಬೇತಿ ಕೋರ್ಸು ಆರಂಭಿಸಿ: ಜಿಲ್ಲೆಯಲ್ಲಿರುವ ಐಟಿಐ, ಡಿಪ್ಲೋಮಾ, ಜಿ.ಟಿ.ಟಿ.ಸಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಗೆ ಅಗತ್ಯವಿರುವ ತರಬೇತಿ ಕೋರ್ಸುಗಳನ್ನು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿಯೇ ಪ್ರಾರಂಭಿಸ ಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮಾಡಲು ಅವಕಾಶ ಕಲ್ಪಿಸಬೇಕು. ವೃತ್ತಿಪರ ಕೋರ್ಸುಗಳು ಮುಗಿದ ನಂತರ ಕೈಗಾರಿಕಾ ಘಟಕಗಳಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಗಳನ್ನೂ ಸಹ ವಿದ್ಯಾರ್ಥಿಗಳಿಗೆ ನೀಡಬೇಕು. ಇದರಿಂದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದವರು ತಿಳಿಸಿದರು.
ಡಾ. ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿರುವ 37 ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಶೇ. 91.8ರಷ್ಟು, 47 ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ಶೇ. 95.1 ರಷ್ಟು ಹಾಗೂ 7 ಬೃಹತ್ ಕೈಗಾರಿಕೆಗಳಲ್ಲಿ ಶೇ.92.4 ರಷ್ಟು ಸೇರಿದಂತೆ ಒಟ್ಟು 91 ಘಟಕಗಳಲ್ಲಿ ಶೇ.93.7ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಲ್ಪಿಸಲಾಗಿದೆ ಎಂದವರು ವಿವರಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ: ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರುನಲ್ಲಿ 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಭೂ ಸ್ವಾಧೀನ ಸೇರಿದಂತೆ ಮತ್ತಿತರ ಪ್ರಕ್ರಿಯೆಗಳನ್ನು ಆದ್ಯತೆಯ ಮೇಲೆ ತ್ವರಿತವಾಗಿ ಪೂರ್ಣಗೊಳಿಸಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದು ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಘಟಕದ ಕೆಲವು ಚಟುವಟಿಕೆಗಳ ಬದಲಾವಣೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹೆಚ್ಚಾಗಿ ರೆಡಿಮಿಕ್ಸ್ ಕಾಂಕ್ರೀಟ್ ಸ್ಥಾಪನೆಗೆ ಅರ್ಜಿಗಳಿದ್ದು, ಇವುಗಳಿಗೆ ಮಾನ್ಯ ಮಾಡುವ ಮೊದಲು ಸುತ್ತಮುತ್ತಲಿನ ಇತರೆ ಘಟಕಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುತ್ತದೆಯೇ ಎಂಬ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ, ನಂತರದಲ್ಲಿ ಅನುಮತಿ ನೀಡಬೇಕು ಎಂದರು.
ಕೈಗಾರಿಕಾ ಪ್ರದೇಶಗಳಲ್ಲಿ ಸ್ವಚ್ಛತೆಗೆ ಪ್ರತಿಯೊಬ್ಬರೂ ವಿಶೇಷ ಒತ್ತು ನೀಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಾಗ ನಾವೂ ಸಹ ಆರೋಗ್ಯಕರವಾಗಿರಲು ಸಾಧ್ಯ. ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಅರಿವು ಮೂಡಿಸುವ ಕಾರ್ಯಗಳಿಗೆ ಹಾಗೂ ಒಣತ್ಯಾಜ್ಯಗಳ ಸಂಗ್ರಹ ಘಟಕಗಳನ್ನು ಸ್ಥಾಪಿಸಲು ಕೈಗಾರಿಕೋದ್ಯಮಿಗಳು ಕೈಜೋಡಿಸಬೇಕು. ಕೈಗಾರಿಕೆಗಳಲ್ಲಿ, ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ದ್ರವತ್ಯಾಜ್ಯ ಗಳನ್ನು ಅಲ್ಲೇ ಸಂಸ್ಕರಿಸಬೇಕು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಆಯುಕ್ತ ಮಂಹಾತೇಶ ಹಂಗರಗಿ, ಛೇಂಬರ್ಸ್ ಆಫ್ ಕಾಮರ್ಸ್‌ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್, ಕಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
2593 ಕೋಟಿ ರೂ.ವ್ಯವಹಾರ
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಮರೈನ್ ಪ್ರೋಡಕ್ಟ್, ಕ್ಯಾಶ್ಯೂನಟ್, ಕಾಫಿ ಬೀನ್ ಸೇರಿದಂತೆ 9 ವಿವಿಧ ಉತ್ಪನ್ನಗಳು ಹೆಚ್ಚಾಗಿ ರಫ್ತಾಗಿವೆ. ಇದರಿಂದ ಒಟ್ಟು 2,593 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಇನ್ನಷ್ಟು ವಸ್ತುಗಳ ರಫ್ತಿಗೆ ಮುಂದಿನ ದಿನಗಳಲ್ಲಿ ಉತ್ತೇಜನ ನೀಡಬೇಕಾಗಿದೆ. ಇದರಿಂದ ಜಿಲ್ಲೆಯ ಆರ್ಥಿಕ ಸ್ಥಿತಿಗತಿ ಉತ್ತಮಗೊಳ್ಳಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕೈಗಾರಿಕಾ ಘಟಕಗಳ ಸ್ಥಾಪನೆಗೆ ನಿವೇಶನ ಹಂಚಿಕೆಯಾಗಿ ಮೂರು-ನಾಲ್ಕು ವರ್ಷಗಳು ಕಳೆದರೂ ಸಹ ಪೂರ್ಣಪ್ರಮಾಣದಲ್ಲಿ ಉದ್ದಿಮೆದಾರರು ಉದ್ದಿಮೆ ಪ್ರಾರಂಭಿಸದೇ ಪ್ರತೀ ಸಭೆಯಲ್ಲಿಯೂ ಕಾಲಾವಕಾಶ ಕೋರಿ ಸಭೆಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ಇದು ಸರಿಯಲ್ಲ. ಮುಂದಿನ ಎರಡು ತಿಂಗಳ ಒಳಗೆ ಕೈಗಾರಿಕಾ ಘಟಕ ಸ್ಥಾಪನೆಗೆ ನಿವೇಶನ ಪಡೆದಿರುವವರು ಘಟಕಗಳನ್ನು ಸ್ಥಾಪಿಸಬೇಕು. ತಪ್ಪಿದ್ದಲ್ಲಿ ನಿವೇಶನವನ್ನು ಇತರರಿಗೆ ಹಂಚಿಕೆ ಮಾಡಲಾಗುವುದು.
- ಸ್ವರೂಪ ಟಿ.ಕೆ., ಜಿಲ್ಲಾಧಿಕಾರಿ.






