ಕಾರಂತರದ್ದು ಸದಾ ಪ್ರಯೋಗಶೀಲ ಮನಸ್ಥಿತಿ: ಡಾ.ರೇಖಾ ಬನ್ನಾಡಿ

ಉಡುಪಿ, ಜೂ.16: ತಮ್ಮ ಬದುಕಿನುದ್ದಕ್ಕೂ 45 ಕಾದಂಬರಿಗಳು ಸೇರಿದಂತೆ ಒಟ್ಟು 421 ಕೃತಿಗಳನ್ನು ರಚಿಸಿರುವ ಡಾ. ಕೋಟ ಶಿವರಾಮ ಕಾರಂತರದ್ದು ಸದಾ ಪ್ರಯೋಗಶೀಲ ಮನಸ್ಥಿತಿ ಎಂದು ಹಿರಿಯ ಸಂಶೋಧಕಿ ಹಾಗೂ ಕುಂದಾಪುರದ ಲೇಖಕಿ ಡಾ.ರೇಖಾ ಬನ್ನಾಡಿ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ ಮಂಗಳ ಗಂಗೋತ್ರಿ, ಡಾ.ಶಿವರಾಮ ಕಾರಂತ ಅಧ್ಯಯನ ಪೀಠ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯ ದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರ ಕುರಿತು ಇಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ್ದ ಒಂದು ದಿನ ವಿಚಾರ ಸಂಕಿರಣದಲ್ಲಿ ಡಾ.ಕಾರಂತರ ಬದುಕು-ಬರಹ ಸಂಶೋಧನೆಗಳ ಸಾಧ್ಯತೆಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
ಕಾರಂತ ಎಂದೂ ಸೋಲು-ಗೆಲುವುಗಳ ಬಗ್ಗೆ ಚಿಂತಿಸದವರು. ನಿರಂತರ ಶ್ರಮ ಅವರ ಹೆಗ್ಗುರುತು. ಕಾರಂತರ ಕಾದಂಬರಿಗಳಲ್ಲಿ ಭಾರತೀಯ ಸಮಾಜದ ಪಲ್ಲಟಗಳ ದರ್ಶನವಾಗುತ್ತವೆ ಎಂದರು.
ರೇಖಾ ಅವರ ಉಪನ್ಯಾಸಕ್ಕೆ ಕವಯಿತ್ರಿ ಜ್ಯೋತಿ ಗುರುಪ್ರಸಾದ್, ಲೇಖಕರಾದ ಡಾ.ನಿಕೇತನ, ರಾಜಶ್ರೀ ಟಿ.ಪೆರ್ಲ ಪ್ರತಿಕ್ರಿಯಿಸಿದರು.
ಸಭಾ ಕಾರ್ಯಕ್ರಮದ ನಂತರ ಮಂಗಳೂರು ವಿವಿಯ ಡಾ.ಶಿವರಾಮ ಕಾರಂತ ಅಧ್ಯಯನ ಪೀಠ ಪ್ರಸ್ತುತ ಪಡಿಸಿದ ಜಗನ್ ಪವಾರ್ ನಿರ್ದೇಶನದ ರಾಜಶ್ರೀ ಪೆರ್ಲ ರಚನೆಯ ‘ನಾನು ಕಾರಂತ’ ನಾಟಕ ಪ್ರದರ್ಶನಗೊಂಡಿತು. ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳು ಇದರಲ್ಲಿ ಅಭಿನಯಿಸಿದ್ದರು.






