ಬಾಳೆಬರೆ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ

ಉಡುಪಿ: ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶ ಹೊರಡಿಸಿದ್ದಾರೆ.
ಬಾಳೆಬರೆ ಘಾಟ್‌ನ ಸರಪಳಿ 42.10ರಿಂದ 42.20ರಲ್ಲಿನ ಹೇರ್‌ಪಿನ್ ತಿರುವಿನಲ್ಲಿ ಮೇ ತಿಂಗಳ ಕೊನೆಯಲ್ಲಿ ಬಿದ್ದ ಮಳೆಯಿಂದ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತವಾಗಿ ಈ ಮಾರ್ಗದಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.
ಪ್ರಸ್ತುತ ಈ ಹೇರ್‌ಪಿನ್ ತಿರುವಿನ ಭಾಗಶ: ಉದ್ದದಲ್ಲಿ ತಡೆಗೋಡೆಯನ್ನು ರಸ್ತೆಯ ಮಟ್ಟದವರೆಗೆ ಮಣ್ಣಿನ ಏರಿಯೊಂದಿಗೆ ನಿರ್ಮಿಸಿದ್ದು, ರಸ್ತೆಯ ಭಾಗದಲ್ಲಿ ಲೀನ್ ಕಾಂಕ್ರೀಟ್ ಹಾಕಲಾಗಿದೆ. ಪ್ರಸ್ತುತ ರಸ್ತೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್ ಸೇರಿದಂತೆ ಇತರೆ ಪ್ರಯಾಣಿಕರು ಸಂಚರಿಸುವ ವಾಹನಗಳು ಹಾಗೂ ಲಘು ಗೂಡ್ಸ್ ವಾಹನಗಳು ಸಂಚರಿಸಲು ಸಾರ್ವಜನಿಕ ಹಿತದೃಷ್ಟಿಯಿಂದ ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾ ಗಿದೆ. ಶಿವಮೊಗ್ಗದ ಜಿಲ್ಲಾದಿಕಾರಿಗದಳು ಈಗಾಗಲೇ ಬಾಳೆಬರೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದರು.
ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನಲ್ಲಿ ಸರಪಳಿ 44.60ರಿಂದ 53.00ರವರೆಗಿನ ಘಾಟಿ ರಸ್ತೆ ಲೋಕೋಪಯೋಗಿ ಇಲಾಖೆಯ ಕುಂದಾಪುರ ಉಪವಿಭಾಗ ವ್ಯಾಪ್ತಿಗೆ ಬರುತ್ತದೆ. ಈ ಘಾಟ್ ರಸ್ತೆಯಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಬಸ್ ಸೇರಿದಂತೆ ಇತರೆ ಪ್ರಯಾಣಿಕರು ಸಂಚರಿಸುವ ವಾಹನ ಗಳು ಹಾಗೂ ಲಘು ಗೂಡ್ಸ್ ವಾಹನಗಳು ಸಂಚರಿಸಲು ಜೂ15ರಿಂದ ಅನುವು ಮಾಡಿಕೊಡ ಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.




