ವಾಲಿಬಾಲ್ ಹಿರಿಯ ಕ್ರೀಡಾಪಟು, ತರಬೇತುದಾರ ಬಬ್ಬಣ್ಣಗೆ ಸನ್ಮಾನ

ಉಡುಪಿ, ಜೂ.17: ಉಡುಪಿ ಜಿಲ್ಲೆಯಲ್ಲಿ ವಾಲಿಬಾಲ್ ಕ್ರೀಡೆಗೆ ಭದ್ರ ಅಡಿಪಾಯ ಹಾಕಿದ ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರ ಪಾಂಗಾಳ ವಾಸುದೇವ ನಾಯಕ್ (ಬಬ್ಬಣ್ಣ) ಅವರನ್ನು ಸ್ಪೈಕರ್ಸ್ ತಂಡದ ವತಿಯಿಂದ ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ರವಿವಾರ ಸನ್ಮಾನಿಸಲಾಯಿತು.
ಪ್ರಮುಖರಾದ ವಿಜಯ್ ಹೆಗ್ಡೆ ಮಾತನಾಡಿ, ಬಾಬಣ್ಣ ಕೇವಲ ತರಬೇತುದಾರರಲ್ಲ, ಸಾವಿರಾರು ಕ್ರೀಡಾಪಟುಗಳ ಬದುಕಿಗೆ ದಿಕ್ಕು ತೋರಿದ ಮಾರ್ಗದರ್ಶಕರಾಗಿದ್ದಾರೆ. ಜಿಲ್ಲೆಯ ವಾಲಿಬಾಲ್ ಕ್ರೀಡೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅನನ್ಯವಾಗಿದ್ದು, ಅನೇಕ ಪ್ರತಿಭಾವಂತ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವರ ಮಾರ್ಗದರ್ಶನವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಂಗಾಳ ವಾಸುದೇವ ನಾಯಕ್, ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ಮಾಧ್ಯಮವಾಗಿದೆ. ತನಗೆ ದೊರೆತಿರುವ ಈ ಗೌರವ ಇನ್ನಷ್ಟು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಪ್ರೇರಣೆ ನೀಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸತ್ಯಜಿತ್ ಶೆಟ್ಟಿ, ಜಿನರಾಜ್ ಎರ್ಮಾಳ್, ಶರತ್ ಕುಮಾರ್ ಮಾತನಾಡಿದರು. ಕುರ್ಕಾಲು ವಾಲಿಬಾಲ್ ತಂಡ, ಬೈಲೂರು ಮಿತ್ರಮಂಡಳಿ, ಕುಂದಾಪುರ ವಾಲಿಬಾಲ್ ತಂಡ ಹಾಗೂ ಸ್ಪೈಕರ್ಸ್ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದ್ಯಮಿ ಸಂತೋಷ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಯನಾ ಗಣೇಶ್ ಅಭಿನಂದನಾ ಪತ್ರವನ್ನು ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಶೆಟ್ಟಿ ವಂದಿಸಿದರು. ವಿನೋದ್ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.






