ಬ್ರಹ್ಮಾವರ: ಪೂರ್ಣಪ್ರಮಾಣದ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸ್ಥಾಪನೆಗೆ ನಿರ್ಧಾರ

ಉಡುಪಿ, ಜೂ.19: ಉಡುಪಿ ಜಿಲ್ಲೆಯ ಬ್ರಹ್ಮಾವರ ಸೇರಿದಂತೆ ರಾಜ್ಯದಲ್ಲಿ ಹೊಸದಾಗಿ ರಚಿಸಲಾದ 38 ತಾಲೂಕು ಗಳ ಪೈಕಿ ಐದು ಕಡೆ ಹೊಸ ಮತ್ತು ಪೂರ್ಣ ಪ್ರಮಾಣದ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಉಚ್ಛ ನ್ಯಾಯಾಲಯ ಶಿಫಾರಸ್ಸಿನ ಮೇಲೆ ಕರ್ನಾಟಕ ಸರಕಾರ ಜೂ.18ರಂದು ಈ ಬಗ್ಗೆ ಆದೇಶ ಹೊರಡಿಸಿದೆ.
ಬ್ರಹ್ಮಾವರದಲ್ಲಿ ಸದ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ಸಂಚಾರಿ ಪೀಠ ಕಾರ್ಯಾಚರಿಸುತ್ತಿದೆ. ಬ್ರಹ್ಮಾವರದಲ್ಲಿ ಇದು ವಾರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದೆ.
ಸರಕಾರದ ಆದೇಶವನ್ನು ಸ್ವಾಗತಿಸಿರುವ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಇದರಿಂದ ಪ್ರಸ್ತುತ ವಾರಕ್ಕೆ 4 ದಿನ ಸಂಚಾರಿ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿರುವ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವನ್ನು ಉಡುಪಿಯಲ್ಲಿಯೇ ಶಾಶ್ವತವಾಗಿ ಉಳಿಸಿಕೊಳ್ಳಲು ಅನುಕೂಲ ವಾಗಲಿದೆ ಎಂದು ತಿಳಿಸಿದ್ದಾರೆ.
ಉಡುಪಿ ವಕೀಲರ ಸಂಘದ ಬಲವಾದ ಆಕ್ಷೇಪಣೆಗಳ ಹೊರತಾಗಿಯೂ, ಕರ್ನಾಟಕದ ಉಚ್ಚ ನ್ಯಾಯಾಲಯವು 2025ರ ಮೇ 12ರಂದು ಪತ್ರ ವೊಂದರ ಮೂಲಕ ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು.
ಉಡುಪಿಯಲ್ಲಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 65 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿತ್ತು. ಸರಕಾರದ ಆದೇಶವೊಂದರ ಮೂಲಕ ಅದು 1961ರ ಜುಲೈ17ರಿಂದ ಕಾರ್ಯಾರಂಭ ಮಾಡಿತ್ತು. ಅಂದಿನಿಂದ, ಅದು ಉಡುಪಿಯ ಜನತೆಗೆ ನ್ಯಾಯ ನೀಡುವ ವಿಷಯದಲ್ಲಿ ಸಾಕಷ್ಟು ಕೆಲಸದ ಹೊರೆ ಯೊಂದಿಗೆ, ಉಡುಪಿ ಜಿಲ್ಲಾ ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಕಾರ್ಯಾಚರಿಸುತ್ತಿತ್ತು.
ಈ ನಿಟ್ಟಿನಲ್ಲಿ, ಉಡುಪಿ ವಕೀಲರ ಸಂಘದ ಅಧ್ಯಕ್ಷನಾಗಿ ರೆನೊಲ್ಡ್ ಅವರು ಉಡುಪಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನು ಬ್ರಹ್ಮಾವರಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಕೈಬಿಟ್ಟು, ಬ್ರಹ್ಮಾವರದಲ್ಲಿ ಪ್ರತ್ಯೇಕ ಮತ್ತು ಹೊಸ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ವನ್ನು ಸ್ಥಾಪಿಸುವಂತೆ ಪ್ರಾರ್ಥಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದ್ದರು. ಅದು ವಿಲೇವಾರಿಗೆ ಬಾಕಿ ಇರುವಾಗಲೇ, ರಿಟ್ ಅರ್ಜಿ ಸಲ್ಲಿಕೆಯ ಫಲಶ್ರುತಿ ಎಂಬಂತೆ ಸರಕಾರವು ಬ್ರಹ್ಮಾವರದಲ್ಲಿ ಹೊಸ ನ್ಯಾಯಾಲಯ ಸ್ಥಾಪನೆಗೆ ಆದೇಶಿಸಿದ್ದು, ಉಡುಪಿಯಿಂದ ಬ್ರಹ್ಮಾವರಕ್ಕೆ ನ್ಯಾಯಾಲಯ ಸ್ಥಳಾಂತರ ಪ್ರಕ್ರಿಯೆಯು ಸ್ಥಗಿತಗೊಂಡಂತಾಗಿದೆ.
ಮಂಗಳೂರಿನ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ಸತತ ಪ್ರಯತ್ನ ಮತ್ತು ಸಕಾಲಿಕ ಬೆಂಬಲ ದಿಂದ ರಾಜ್ಯ ಸರಕಾರ ಬ್ರಹ್ಮಾವರದಲ್ಲಿ ಹೊಸ ಹಾಗೂ ಪೂರ್ಣಪ್ರಮಾಣದ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸ್ಥಾಪನೆಗೆ ಮಂಜೂರಾತಿ ನೀಡಿದೆ ಎಂದು ರೆನೋಲ್ಡ್ ತಿಳಿಸಿದ್ದಾರೆ.
ಇದರೊಂದಿಗೆ ಬ್ರಹ್ಮಾವರದಲ್ಲಿ ವಾರದಲ್ಲಿ ನಾಲ್ಕು ದಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸಂಚಾರಿ ಪೀಠವಾಗಿ ಕಾರ್ಯಾಚ ರಿಸುತಿದ್ದ ಪೀಠ ಇನ್ನು ಮುಂದೆ ಶಾಶ್ವತವಾಗಿ ಉಡುಪಿಯಲ್ಲಿ ಕಾರ್ಯಾಚರಿಸ ಲಿದೆ ಎಂದು ಅವರು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಮಾತ್ರವಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ರಾಯಚೂರು ಜಿಲ್ಲೆಯ ಮಸ್ಕಿ, ಚಾಮರಾಜನಗರ ಜಿಲ್ಲೆಯ ಹನೂರು ಹಾಗೂ ಬಾಗಲಕೋಟೆ ಜಿಲ್ಲೆಯ ಇಳಕಲ್‌ಗಳಲ್ಲಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮತ್ತು ಪ್ರತಿ ನ್ಯಾಯಾಲಯಕ್ಕೆ ಒಟ್ಟು ಏಳು ಮಂದಿ ಪೂರಕ ಅಧಿಕಾರಿ/ ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲು ಸರಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಮಂಜೂರಾದ ಹುದ್ದೆಗಳಲ್ಲಿ ಸಿವಿಲ್ ನ್ಯಾಯಾಧೀಶರು 1, ಶೀಘ್ರ ಲಿಪಿಕಾರರು (ಗ್ರೇಡ್2)-1, ಪ್ರಥಮ ದರ್ಜೆ ಸಹಾಯಕರು-1, ಬೆರಳಚ್ಚುಗಾರರು-1, ಅಟೆಂಡರ್-1, ಪಪ್ಯೂನ್-1 ಸೇರಿದ್ದಾರೆ. ರಾಜ್ಯ ಹೈಕೋರ್ಟ್ ದಕ್ಷಿಣ ಕನ್ನಡದ ಕಡಬ ಸೇರಿದಂತೆ ರಾಜ್ಯದ 38 ತಾಲೂಕುಗಳಲ್ಲಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳನ್ನು ಸ್ಥಾಪಿಸಲು ನಿರ್ಣಯಿಸಿ ಸರಕಾರಕ್ಕೆ ಕಳುಹಿಸಿತ್ತು.






