ದುಶ್ಚಟಗಳಿಂದ ದೂರ ಇದ್ದರೆ ಸಾಧನೆ ಸಾಧ್ಯ: ನ್ಯಾ.ನಿತಿನ್ ರಾವ್

ಉಡುಪಿ, ಜೂ.20: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇದ್ದು ಜೀವನದಲ್ಲಿ ಸಾಧನೆ ಮಾಡುವುದರ ಕುರಿತು ಯೋಚಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಉಡುಪಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ಯಶವಂತ ರಾವ್ ಹೇಳಿದ್ದಾರೆ.
ಕಲ್ಯಾಣಪುರದಲ್ಲಿ ಪ್ಲಾನೆಟ್ ಮಾರ್ಸ್ ಫೌಂಡೇಶನ್ ವತಿಯಿಂದ ಶುಕ್ರವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡುತಿದ್ದರು.
ಇಂದು ವಿದ್ಯಾರ್ಥಿಗಳು ಸುಲಭವಾಗಿ ಮಾದಕ ದ್ರವ್ಯಗಳಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಆತಂಕ ಕಾರಿ ಸಂಗತಿಯಾಗಿದೆ. ಮಕ್ಕಳು ಅನಗತ್ಯವಾಗಿ ಟಿವಿ ಮತ್ತು ಮೊಬೈಲ್, ಸಾಮಾಜಿಕ ಜಾಲತಾಣಗಳಿಗೆ ಪ್ರೇರಿತರಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು. ಮಕ್ಕಳು ಕಲಿಕೆಯ ಅವಧಿಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವತ್ತ ಆಲೋಚನೆ ಮಾಡಬೇಕು. ಪಾಲಕರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸದಿದ್ದರೆ ಮುಂದೆ ಅವರ ಭವಿಷ್ಯ ಮುಸುಕಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಮಾತನಾಡಿದರು. ಉಡುಪಿ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. 2025-26ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಯಲ್ಲಿ ಉತ್ತಮ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಾಲನಿಕೇತನ ಸಂಸ್ಥೆ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಪ್ಲಾನೆಟ್ ಮಾರ್ಸ್ ಸಂಸ್ಥೆಯ ಅಧ್ಯಕ್ಷೆ ದೀಪ್ತಿ ಸುವರ್ಣ, ಉಪಾಧ್ಯಕ್ಷ ಹರೀಶ್ ಕೋಟ್ಯಾನ್, ಕೋಶಾಧಿಕಾರಿ ರೋಸ್ಲಿನ್ ಕ್ರಾಸ್ತಾ, ಸಂಸ್ಥೆಯ ಟ್ರಸ್ಟಿಗಳು ಉಪಸ್ಥಿತರಿದ್ದರು. ಗೀತಾ, ಸೌಜನ್ಯ ಮತ್ತು ಅನುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.






