ಸೇವಾ ನ್ಯೂನತೆ: ಗ್ರಾಹಕರಿಗೆ ಪರಿಹಾರ ನೀಡಲು ಇನ್ಸೂರೆನ್ಸ್ ಕಂಪೆನಿಗೆ ಗ್ರಾಹಕ ನ್ಯಾಯಾಲಯ ಆದೇಶ

ಉಡುಪಿ, ಜೂ.20: ಸೇವಾ ನ್ಯೂನತೆ, ಅನುಚಿತ ವ್ಯಾಪಾರ ಸಾಬೀತಾಗಿ ರುವ ಹಿನ್ನೆಲೆಯಲ್ಲಿ ಚೋಲಮಂಡಲಮ್ ಜನರಲ್ ಇನ್ಸ್‌ರೆನ್ಸ್ ಕಂಪೆನಿಯು 15ಲಕ್ಷ ರೂ. ಶೇ.9ಬಡ್ಡಿಯೊಂದಿಗೆ ಹಾಗೂ ಪರಿಹಾರ ಮೊತ್ತವನ್ನು ಗ್ರಾಹಕರಿಗೆ ಪಾವತಿಸುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಬ್ರಹ್ಮಾವರ ಕೋಡಿ ಕನ್ಯಾನ ನಿವಾಸಿ ವೀಣಾ ಕಾಂಚನ್ ಎಂಬವರ ಮಗ ಚರಣ್ ಕಾಂಚನ್ ರಸ್ತೆ ಅಪಘಾತದಲ್ಲಿ ಮೃತಪಟ್ಟದ್ದರು. ಚರಣ್ ಹೊಂದಿದ್ದ ಕಡ್ಡಾಯ ವೈಯಕ್ತಿಕ ವಿಮಾ ಪಾಲಿಸಿ ಸಿಪಿಎಯಡಿಯಲ್ಲಿ ವಿಮಾ ಪರಿಹಾರ ಮೊತ್ತವನ್ನು ಪಡೆಯಲು ವೀಣಾ ಕಾಂಚನ್ ಚೋಲಮಂಡಲಮ್ ಜನರಲ್ ಇನ್ಸ್‌ರೆನ್ಸ್ ಕಂಪೆನಿಗೆ ಸೂಕ್ತವಾದ ಎಲ್ಲಾ ದಾಖಲೆಗಳೊಂದಿಗೆ ಕ್ಲೇಮು ಅರ್ಜಿಯನ್ನು ಸಲ್ಲಿಸಿದ್ದರು.
ಆ ಕಂಪೆನಿಯು ಸಮಂಜಸ ಕಾರಣ ಇಲ್ಲದೆ ಕ್ಲೇಮು ಮೊತ್ತವನ್ನು ಬಿಡುಗಡೆ ಮಾಡಲು ವಿಳಂಬ ಮಾಡಿತು. ನೊಂದ ಗ್ರಾಹಕರು ವಕೀಲರ ಮೂಲಕ ಸಂಬಂಧಪಟ್ಟ ಕಂಪೆನಿಗೆ ನೋಟೀಸನ್ನು ನೀಡಿದರೂ ಹಣವನ್ನು ಬಿಡುಗಡೆ ಗೊಳಿಸಲಿಲ್ಲ. ಕ್ಲೇಮು ಮೊತ್ತ ಹಾಗೂ ಪರಿಹಾರವನ್ನು ಪಡೆಯಲು ವೀಣಾ ಕಾಂಚನ್, ಗ್ರಾಹಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಅರ್ಜಿದಾರರ ಕ್ಲೇಮು ಸಲ್ಲಿಸಲಾದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯವು, ವಿಮಾ ಕಂಪೆನಿಗೆ ಸೂಕ್ತ ದಾಖಲೆಗಳನ್ನು ಕ್ಲೇಮುದಾರರು ಸಲ್ಲಿಸಿದರೂ, ಹೆಚ್ಚುವರಿ ದಾಖಲೆಯಾದ ಎಮ್‌ಎಲ್‌ಸಿ ಟ್ರೀಟ್ ಮೆಂಟ್ ರಿಪೋರ್ಟ್ ಕೇಳಿರುವುದು ಹಾಗೂ ಅದರ ಅಗತ್ಯತೆಯನ್ನು ವಿವರಿಸದೇ ಅನಗತ್ಯವಾಗಿ ಕ್ಲೇಮು ಮೊತ್ತ ವನ್ನು ನೀಡದೆ ಇರುವುದು ಸಕಾರಣವಾಗಿರುವುದಿಲ್ಲ ಎಂದು ಮನಗಂಡಿತು.
ವಿಮಾ ಕಂಪೆನಿಯ ಸೇವಾ ನ್ಯೂನತೆ ಹಾಗೂ ಅನುಚಿತ ವ್ಯಾಪಾರವನ್ನು ಸಾಬೀತು ಪಡಿಸುತ್ತದೆ ಎಂದು ಅರ್ಜಿದಾರರ ದೂರು ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು. ಕ್ಲೇಮು ಮೊತ್ತವಾದ 15ಲಕ್ಷ ರೂ.ವನ್ನು ವಕೀಲರ ನೋಟೀಸು ನೀಡಿದ 2024ರ ನ.23ರಿಂದ ಶೇ.9ರ ಬಡ್ಡಿಯೊಂದಿಗೆ ಪಾವತಿಸುವ ವರೆಗೆ ಹಾಗೂ ಪರಿಹಾರ ಮೊತ್ತ 25,000ರೂ. ಹಾಗೂ 10,000ರೂ. ವ್ಯಾಜ್ಯ ಖರ್ಚನ್ನು 2026ರ ಮೇ 18ರ ಆದೇಶದ ದಿನಾಂಕ ದಿಂದ 45 ದಿವಸದ ಒಳಗಾಗಿ ಪಾವತಿಸಬೇಕೆಂದು ಆದೇಶಿಸಿದೆ.
ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಸುನೀಲ್ ಟಿ.ಮಾಸರಡ್ಡಿ ಹಾಗೂ ಸುಜಾತ ಬಿ.ಕೊರಳ್ಳಿ ಸದಸ್ಯರನ್ನೊಳ ಗೊಂಡ ನ್ಯಾಯಪೀಠವು ಈ ಆದೇಶ ನೀಡಿದೆ. ದೂರು ಅರ್ಜಿದಾರರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಕಾರ್ಕಳ ಹಾಗೂ ಪ್ರವೀಣ್ ಎಂ.ಪೂಜಾರಿ ಮಲ್ಪೆ ವಾದ ಮಂಡಿಸಿದ್ದರು.






