ಮುದ್ರಾಡಿ ಗ್ರಾ.ಪಂ. ಸಾಧನೆಯ ಹಿಂದಿನ ಸ್ತ್ರೀ‘ಶಕ್ತಿ’ ; ಬಡತನ ನಿರ್ಮೂಲನೆಗೆ ಬಲ ತುಂಬಿದ ಸ್ವಸಹಾಯ ಸಂಘಗಳು

ಉಡುಪಿ, ಜೂ.21: ಗ್ರಾಮದ ಅಭಿವೃದ್ದಿ ಅಂದರೆ ಕೇವಲ ರಸ್ತೆ, ಕಟ್ಟಡ ಅಥವಾ ಮೂಲಸೌಕರ್ಯಗಳ ನಿರ್ಮಾಣ ಮಾತ್ರವಲ್ಲ. ಅದರೊಂದಿಗೆ ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬದ ಆರ್ಥಿಕ, ಸಾಮಾಜಿಕ ಮತು ಜೀವನಮಟ್ಟ ವನ್ನು ಸುಧಾರಿಸುವುದು ಕೂಡ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆ ರೀತಿಯ ಸಾಧನೆಯನ್ನು ತೀರಾ ಗ್ರಾಮೀಣ ಪ್ರದೇಶವಾಗಿರುವ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ಮಾಡಿದೆ. ಈ ಮೂಲಕ ಅದು ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸಾಧನೆಯ ಹಿಂದಿನ ಪ್ರಮುಖ ಶಕ್ತಿಯಾಗಿ ಸಂಜೀವಿನಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿ ರುವ ಮಹಿಳಾ ಸ್ವಸಹಾಯ ಗುಂಪುಗಳು ಹೊರಹೊಮ್ಮಿದೆ.
ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ ವಿಕಾಸ ಪುರಸ್ಕಾರದ ಅಡಿಯಲ್ಲಿ ‘ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ’ ವಿಭಾಗದಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ಪ್ರಥಮ ಬಹುಮಾನ ಪಡೆದು ಕೊಂಡಿದೆ. ಇದರಲ್ಲಿ ಸಂಜೀವಿನಿ ಯೋಜನೆಯ ಅಧೀನದ ಮಹಿಳಾ ಸ್ವಸಹಾಯ ಗುಂಪುಗಳು ಮಹತ್ವದ ಪಾತ್ರ ವಹಿಸಿವೆ. ಸ್ತ್ರೀಶಕ್ತಿಯ ಬಲದಿಂದ ಗ್ರಾಮದ ಬಡತನ ಬಹುತೇಕ ನಿವಾರಣೆಯಾಗಿದೆ.
ಸಂಜೀವಿನಿ ಯೋಜನೆಯಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ತಮ್ಮ ತಮ್ಮ ಕುಟುಂಬಗಳ ಜೀವನ ಮಟ್ಟವನ್ನು ಸುಧಾರಿಸಿ ಕೊಂಡಿದ್ದಾರೆ. ಕೃಷಿ ಪ್ರಧಾನವಾಗಿರುವ ಈ ಭಾಗದಲ್ಲಿ ಮಹಿಳೆಯರು ಉಪ್ಪಿನ ಕಾಯಿ, ಕೋಳಿ ರೊಟ್ಟಿ ತಯಾರಿಕೆ, ಜೇನು ಕೃಷಿ, ಬ್ಯೂಟಿ ಪಾರ್ಲರ್ ಸಹಿತ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೂ ಸಂಜೀವಿನಿ ಯೋಜನೆಯಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಆ ಮೂಲಕ ಇವರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 650 ಮಹಿಳೆಯರನ್ನು ಸಂಂಘಟಿಸಿ 65 ಸಕ್ರಿಯ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ.ಈ ಮೂಲಕ ಶೇ.100ರಷ್ಟು ಬ್ಯಾಂಕ್ ಸಂಪರ್ಕವನ್ನು ಸಾಧಿಸಲಾಗಿದೆ. ಇದರಿಂದ ಒಂದು ಕೋಟಿ ರೂ.ವರೆಗೆ ಸಾಲವನ್ನು ಸಣ್ಣ ಉದ್ಯಮಗಳಿಗೆ ತೊಡಗಿಸಿಕೊಳ್ಳಲಾಗಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ, ರಾಜ್ಯ ಸರಕಾರದ ವೃದ್ದಾಪ್ಯ ಪಿಂಚಣಿ ಯೋಜನೆ, ವಿಧವಾ ಪಿಂಚಣಿ ಯೋಜನೆ, ರಾಷ್ಟ್ರೀಯ ಯೋಜನೆ ಅನುಷ್ಠಾನದಲ್ಲೂ ಮುದ್ರಾಡಿ ಗ್ರಾಮ ಪಂಚಾಯತ್ ಶೇ.100ರಷ್ಟು ಸಾಧನೆ ಮಾಡಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯೂ ಸಮರ್ಪಕವಾಗಿ ನಡೆಯುತ್ತಿದೆ.
ಮುದ್ರಾಡಿ ಗ್ರಾಮ ಪಂಚಾಯತ್ ಬಡತನ ಮುಕ್ತ ಗ್ರಾಪಂ ಆಗುವಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೂ ಮಹತ್ವದ ಪಾತ್ರ ವಹಿಸಿದೆ. ನರೇಗಾ ಅಡಿಯಲ್ಲಿ 28,500 ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದ್ದು, 128 ಕುಟುಂಬಗಳು 100 ದಿನಗಳ ಉದ್ಯೋಗ ಪೂರ್ಣಗೊಳಿಸಿವೆ. ವಸತಿ ಯೋಜನೆಯಡಿ 28 ಮನೆಗಳನ್ನು ನೀಡಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಸ್ ಖಾರ್ವಿ ಮಾಹಿತಿ ನೀಡಿದ್ದಾರೆ.
‘ಸಂಯೋಜಿತ ಮಾದರಿ ಅಳವಡಿಸಿಕೊಂಡು, ನರೇಗಾ ವೇತನವನ್ನು ವಸತಿ ಯೋಜನೆಗಳೊಂದಿಗೆ ಸಂಯೋಜಿಸ ಲಾಗಿದೆ. ರೋಜಗಾರ ದಿವಸ್ ಮತ್ತು ಮಹಿಳಾ ಸಭೆಗಳ ಮೂಲಕ ಸಮುದಾಯವನ್ನು ಚುರುಕುಗೊಳಿಸ ಲಾಗಿದೆ. ಕಾರ್ಮಿಕರ ಕೊರತೆ ನಿವಾರಿಸಲು ಯಾಂತ್ರೀಕೃತ ಕೃಷಿ ವಿಧಾನಗಳನ್ನು ಉತ್ತೇಜಿಸಲಾಗಿದೆ. ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ಪಾರದರ್ಶಕತೆ ಎಂದು ಖಚಿತಪಡಿಸ ಲಾಗಿದೆ. ಇದರಿಂದ ನಮ್ಮ ಗ್ರಾಪಂ ಈ ರೀತಿಯ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಸ್ವಸಹಾಯ ಗುಂಪುಗಳ ಸಂಘಟಿತ ಶಕ್ತಿ, ಸ್ವಾವಲಂಬನೆ ಮತ್ತು ಉದ್ಯಮಶೀಲತೆಯೇ ಮುದ್ರಾಡಿ ಗ್ರಾಮ ಪಂಚಾಯತ್‌ನ್ನು ರಾಷ್ಟ್ರಮಟ್ಟದ ಪ್ರಶಸ್ತಿಗೆ ಪಾತ್ರವಾಗುವಂತೆ ಮಾಡಿದೆ.






