ಬೆಂಗಳೂರು - ಮಂಗಳೂರು - ಮಡ್ಗಾಂವ್ ವಂದೇ ಭಾರತ್ ರೈಲು ಸಂಚಾರಕ್ಕೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜೂ.21: ಬೆಂಗಳೂರು-ಮಂಗಳೂರು-ಮಡ್ಗಾಂವ್ ವಂದೇ ಭಾರತ್ ರೈಲು ಸಂಚಾರ ಸಂಬಂಧ ಶೀಘ್ರವೇ ಬೆಂಗಳೂರಿನಲ್ಲಿ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ನಡೆದಿರುವುದರಿಂದ ಇದರ ಶೋಧನೆಗೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಿಂದ ವರದಿ ಸಲ್ಲಿಕೆಯಾಗಲಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ವರಿಷ್ಠರ ಹಂತದಲ್ಲಿ ನಡೆಯುವ ಚರ್ಚೆ, ತೀರ್ಮಾನ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಜಿಲ್ಲೆಯಲ್ಲಿ ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆಗೆ ವೇಗ ನೀಡಲಾಗುವುದು. ಕುಸುಮ್ ಯೋಜನೆಯಡಿ ನಿರ್ಮಣವಾಗುತ್ತಿರುವ ಸೋಲಾರ್ ಘಟಕಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲಾಗುವುದು. ಮಲ್ಪೆ ತೀರ್ಥಹಳ್ಳಿ ಸಹಿತ ಜಿಲ್ಲೆಯ ವಿವಿಧೆಡೆ ಇರುವ ರಾ.ಹೆ. ಕಾಮಗಾರಿ ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯ ಟೋಲ್ ಸಮೀಪದಲ್ಲಿ ಲಾರಿ ಸಹಿತ ಘನವಾಹನಗಳು ಅನಗತ್ಯವಾಗಿ ನಿಲ್ಲುತ್ತಿರುವುದನ್ನು ತಪ್ಪಿಸಲು ತಕ್ಷಣವೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿಯೂ ವೇಗವಾಗಿ ನಡೆಯುತ್ತಿದೆ ಎಂದರು.
ಜನಸಾಮಾನ್ಯರ ಬದುಕು ಸುಧಾರಣೆ ಹಾಗೂ ಆರ್ಥಿಕ ಪರಿಸ್ಥಿತಿ ಉನ್ನತೀಕರಿಸಲು ಕೇಂದ್ರ ಸರಕಾರ ಕಳೆದ 12 ವರ್ಷಗಳಲ್ಲಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 4 ಕೋಟಿಗೂ ಅಧಿಕ ಮನೆ ನಿರ್ಮಾಣ ಮಾಡಲಾಗಿದೆ. ಪಿಎಂ ಸ್ವನಿಧಿ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಪ್ರೋತ್ಸಾಹ, ವಿದ್ಯುತ್ ಕಾಣದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ., ರೈಲ್ವೇ ಹಳಿ ವಿದ್ದುದ್ದೀಕರಣ ಪ್ರಕ್ರಿಯೆ ಶೇ.98ರಷ್ಟು ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಗವಾಗಿ ಸಾಗುತ್ತಿದೆ. ದೇಶವ್ಯಾಪಿ ಉಚಿತ ಪಡಿತ ವಿತರಣೆ ನಡೆಯುತ್ತಿದೆ ಎಂದರು.
ರಾಜ್ಯ ಸರಕಾರದ ನಿರ್ಲಕ್ಷ್ಯದ ಕಾರಣದಿಂದ ಕೇಂದ್ರದ ಹಲವು ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನದ ಜತೆಗೆ ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕು. ಕಳೆದ 3 ವರ್ಷಗಳಿಂದ ರಾಜ್ಯ ಸರಕಾರ ಒಂದೇ ಒಂದು ಮನೆ ನಿರ್ಮಾಣ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಪ್ರಮುಖರಾದ ಶ್ರೀಕಾಂತ್ ನಾಯಕ್, ಮಧುಕರ ಮುದ್ರಾಡಿ, ಮಹಾವೀರ ಹೆಗ್ಡೆ, ಶಿವಕುಮಾರ್ ಅಂಬಲಪಾಡಿ, ಶಶಾಂಕ ಶಿವತ್ತಾಯ, ದಿವಾಕರ ಶೆಟ್ಟಿ ಹಾಜರಿದ್ದರು.






