ಯೋಗ ಒತ್ತಡ ನಿವಾರಣೆಗೆ ಸಹಕಾರಿ: ಸಿಇಓ ಪ್ರತೀಕ್ ಬಾಯಲ್

ಉಡುಪಿ, ಜೂ.21: ಯೋಗವು ಒತ್ತಡ ನಿವಾರಣೆಗೆ ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಅತಿ ಹೆಚ್ಚು ಒತ್ತಡ ಅನುಭವಿಸುತ್ತಾರೆ. ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹವು ಸಮನ್ವಯ ದಿಂದ ಕಾರ್ಯ ನಿರ್ವಹಿಸುತ್ತದೆ. ನಾಳೆ ಮತ್ತು ನಿನ್ನೆಯ ನಡುವಿನ ಯೋಚನೆಗಳಿಂದ ಮನಸ್ಸು ಒತ್ತಡಕ್ಕೊಳಗಾಗುತ್ತದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ್ಕೌಟ್ಸ್‌ಗೈಡ್ಸ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಗಳ ಇಲಾಖೆ, ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗ ದೊಂದಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಘೋಷವಾಕ್ಯದೊಂದಿಗೆ ನಡೆದ 12ನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಯೋಗವು ನಮಗೆ ವರ್ತಮಾನದಲ್ಲಿ ಬದುಕುವುದನ್ನು ಕಲಿಸುತ್ತದೆ. ಆರೋಗ್ಯಕರವಾಗಿ ವೃದ್ದಾಪ್ಯವನ್ನು ಎದುರಿ ಸಲು ಯೋಗ ಮಾಡಬೇಕು. ಇದರಿಂದ ನಾವು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯಯುತರಾಗುವ ಜೊತೆಗೆ ಕ್ರಿಯಾಶೀಲರಾಗಿ ವೃದ್ಧಾಪ್ಯವನ್ನು ಕಳೆಯಬಹುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜಗತ್ತು ಭಾರತದತ್ತ ತಿರುಗಿ ನೋಡುವಂತಹ ಹಲವಾರು ಕಾರ್ಯಕ್ರಮಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ್ದಾರೆ ಅದರಲ್ಲಿ ಯೋಗ ದಿನಾಚರಣೆಯೂ ಒಂದು. ಭಾರತೀಯ ಆರೋಗ್ಯ ಪರಂಪರೆಯ ಪ್ರಾಚೀನ ಜ್ಞಾನವನ್ನು ವಿಶ್ವಕ್ಕೆ ನೀಡಿ ಎಲ್ಲರೂ ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ದೃಷ್ಟಿಯಿಂದ ದೇಶ-ವಿದೇಶ ಗಳಲ್ಲಿ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹಿರಿಯ ಕಿರಿಯರ ಬೇಧವಿಲ್ಲದೆ ಎಲ್ಲರೂ ದಿನಕ್ಕೆ ಒಂದು ಘಂಟೆ ಯೋಗಾಭ್ಯಾಸ ಮಾಡಬೇಕು. ಜಿಲ್ಲೆಯಿಂದ ತಯಾರಾಗುವ ಯೋಗಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದರು.
ನಿತ್ಯ ಯೋಗಾಭ್ಯಾಸದಿಂದ ಆರೋಗ್ಯವೃದ್ದಿಯಾಗುತ್ತದೆ. ಭಾರತದ ಯೋಗವನ್ನು ಇಂದು ವಿಶ್ವದ ಎಲ್ಲ ರಾಷ್ಟ್ರಗಳೂ ಅನುಸರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಆಯುಷ್ಯ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಯೋಗದಲ್ಲಿ ಕಂಡುಕೊಳ್ಳಬಹುದು. ಪ್ರಧಾನಿ ಮೋದಿ ಇಳಿವಯಸ್ಸಿನಲ್ಲಿಯೂ ದಿನಕ್ಕೆ 18 ಗಂಟೆ ಕೆಲಸ ಮಾಡು ತ್ತಾರೆ. ಯೋಗಾಭ್ಯಾಸವನ್ನು ದಿನನಿತ್ಯದ ಭಾಗವಾಗಿಸಿದಾಗ ಇದು ಸಾಧ್ಯ. ದಿನವಿಡಿ ಲವಲವಿಕೆಯಿಂದಿರಲು ಯೋಗಾಭ್ಯಾಸ ಮಾಡಬೇಕು ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ, ಡಯಟ್ ಪ್ರಾಂಶು ಪಾಲ ಅಶೋಕ್ ಕಾಮತ್, ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.
ಆಯುಷ್ ಇಲಾಖೆ ಉಪ ನಿರ್ದೇಶಕ ಸತೀಶ್ ಆಚಾರ್ಯ ಸ್ವಾಗತಿಸಿ, ಹೇಮಲತಾ ವಂದಿಸಿದರು.






