ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಟಾಟಾ ಕಂಪನಿ: ಸಿಪಿಎಂ ತೀವ್ರ ವಿರೋಧ

ಉಡುಪಿ, ಜೂ.22: ರಾಜ್ಯದ 15 ಜಿಲ್ಲೆಗಳ ವಿದ್ಯುತ್ ವಿತರಣೆಗೆ ಅನುಮತಿ ಕೋರಿ ಮುಂಬಯಿಯ ದಿ ಟಾಟಾ ಪವರ್ ಕಂಪೆನಿ ಲಿ., ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ (ಕೆಇಆರ್‌ಸಿ) ಅರ್ಜಿ ಸಲ್ಲಿಸಿರುವುದು ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಟಾಟಾ ಕಂಪನಿಯ ಕೋರಿಕೆಯನ್ನು ತಿರಸ್ಕರಿಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ(ಮಾರ್ಕ್ಸ್‌ವಾದಿ) ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರ ಹಾಗೂ ಕೆಇಆರ್‌ಸಿಯನ್ನು ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ಕುರಿತು ನಿರ್ಣಯ ತೆಗೆದು ಕೊಳ್ಳಲಾಯಿತು. ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯ 15 ಜಿಲ್ಲೆಗಳಲ್ಲಿ 2003ರ ವಿದ್ಯುತ್ ಕಾಯ್ದೆ ಸೆಕ್ಷನ್ 14 ಹಾಗೂ 15ರ ಅಡಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆಇಆರ್‌ಸಿಗೆ ದಿ ಟಾಟಾ ಪವರ್ ಕಂಪನಿ ಅರ್ಜಿ ಸಲ್ಲಿಸಿದೆ.
ಇದು ರಾಜ್ಯದ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರ ಮಾಡಿಕೊಡುವ ಷಡ್ಯಂತ್ರದ ಭಾಗವಾಗಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿ ಆರೋಪಿಸಿದೆ.
ನರೇಂದ್ರ ಮೋದಿ ನಾಯಕತ್ವದ ಒಕ್ಕೂಟ ಸರಕಾರ ಮಾಡಿರುವ ವಿದ್ಯುತ್ ತಿದ್ದುಪಡಿ ಮಸೂದೆಯ ಅಂಶಗಳನ್ನು ಉಪಯೋಗಿಸಿಕೊಳ್ಳಲು ಇಂತಹ ಪ್ರಯತ್ನಕ್ಕೆ ಖಾಸಗಿ ಕಂಪನಿಗಳು ಮುಂದಾಗಿವೆ. ಕೆಇಬಿಯನ್ನು ವಿಭಜನೆ ಮಾಡಿ ವಿದ್ಯುತ್ ವಿತರಣಾ ಕಂಪನಿಗಳನ್ನು ಮಾಡಿದಾಗಲೇ, ಇದು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವಾಗಿದೆ ಎಂದು ಸಿಪಿಐ(ಎಂ) ಪಕ್ಷವು ಎಚ್ಚರಿಕೆಯನ್ನು ನೀಡಿತ್ತು ಎಂದು ಅದು ಹೇಳಿದೆ.
ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಹಲವಾರು ಖಾಸಗಿ ಕಂಪನಿಗಳು ಪ್ರವೇಶ ಪಡೆದುಕೊಳ್ಳುವುದು ಮಾತ್ರವಲ್ಲ, ವಿದ್ಯುತ್ ಉತ್ಪಾದನೆ, ಸಾಗಾಣಿಕೆ ಮತ್ತು ವಿತರಣೆ ಈ ಮೂರು ಆಯಾಮಗಳಲ್ಲೂ ಖಾಸಗೀಕರಣ ಮಾಡುವ ಉದ್ದೇಶದಿಂದಲೇ ‘ವಿದ್ಯುತ್ ತಿದ್ದುಪಡಿ ಮಸೂದೆ-2025’ನ್ನು ಕೇಂದ್ರ ಬಿಜೆಪಿ ಸರಕಾರ ಅಂಗೀಕರಿಸಿದೆ ಎಂದು ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.
ಒಂದೇ ವಿದ್ಯುತ್ ವಿತರಣಾ ಪ್ರದೇಶದಲ್ಲಿ ಹಲವು ವಿತರಣಾ ಕಂಪನಿಗಳಿಗೆ ಅವಕಾಶ ನೀಡುವುದು, ವಿದ್ಯುತ್ ದರಗಳನ್ನು ವಿಪರೀತವಾಗಿ ಹೆಚ್ಚಿಸುವುದು, ಕ್ರಾಸ್-ಸಬ್ಸಿಡಿಗಳನ್ನು ರದ್ದು ಮಾಡುವುದು, ಮುಂತಾದ ಅಂಶಗಳನ್ನು ಇದು ಒಳಗೊಂಡಿದೆ. ರಾಜ್ಯಗಳ ವಿದ್ಯುತ್ ಸ್ವಾಯತ್ತತೆಯನ್ನು ಇದು ಸಂಪೂರ್ಣವಾಗಿ ನಾಶ ಮಾಡುತ್ತದೆ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ವಿದ್ಯುತ್ ಕ್ಷೇತ್ರ ಸರಕಾರ ಜನತೆಗಾಗಿ ನಿರ್ವಹಿಸಬೇಕಾಗಿರುವ ಭಾಧ್ಯತೆಯನ್ನು ಒಳಗೊಂಡಿದೆ. ಟಾಟಾ ಕಂಪನಿಯಂತಹ ಖಾಸಗಿ ಕಾರ್ಪೊರೇಟುಗಳು ಇಲ್ಲಿ ಪ್ರವೇಶ ಮಾಡಿದರೆ, ಸರಕಾರಗಳು ಈ ಭಾಧ್ಯತೆ ಯನ್ನು ಕಳಚಿಕೊಳ್ಳುತ್ತವೆ. ಇದರಿಂದ ಗೃಹ ಬಳಕೆದಾರರು, ಸಾರ್ವಜನಿಕರು, ಸಣ್ಣ ರೈತರು, ಪಂಪಸೆಟ್ ಬಳಕೆ ದಾರರು, ಸಣ್ಣ ಕೈಗಾರಿಕೆಗಳು ತೀವ್ರವಾದ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಉದ್ಯೋಗದ ಮೇಲೂ ಇದು ತೀವ್ರ ಪರಿಣಾಮ ಬೀರುತ್ತದೆ ಎಂದು ಅದು ಆರೋಪಿಸಿದೆ.
ಆದ್ದರಿಂದ ವಿದ್ಯುತ್ ವಿತರಣಾ ವಲಯಕ್ಕೆ ಟಾಟಾ ಕಂಪನಿ ಪ್ರವೇಶಕ್ಕೆ ಅವಕಾಶ ನೀಡಬಾರದು. ಕೆಇಆರ್‌ಸಿ ಮತ್ತು ರಾಜ್ಯ ಸರಕಾರ ಇಂತಹ ಪ್ರಯತ್ನಗಳನ್ನು ತಕ್ಷಣ ತಡೆ ಹಿಡಿಯಬೇಕು. ಹಾಗೂ ಕರ್ನಾಟಕದ ಜನತೆ ಇಂತಹ ಪ್ರಯತ್ನಗಳನ್ನು ವಿರೋಧಿಸಬೇಕು ಎಂದು ಪಕ್ಷದ ರಾಜ್ಯ ಸಮಿತಿ ಕರೆ ನೀಡಿದೆ ಹಾಗೂ ಇದರ ವಿರುದ್ಧ ತೀವ್ರ ಹೋರಾಟಗಳನ್ನು ನಡೆಸಲು ಸಿಪಿಎಂ ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.






