ಬಿಎಲ್‌ಓ, ಬಿಎಲ್‌ಎಗಳ ಮೇಲೆ ವಿಶೇಷ ಜವಾಬ್ದಾರಿ: ಉಡುಪಿ ಡಿಸಿ ಸ್ವರೂಪ ಟಿ.ಕೆ

ಉಡುಪಿ: ಚುನಾವಣಾ ಆಯೋಗದ ಮೂಲಕ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಬಿಎಲ್‌ಓ ಹಾಗೂ ಬಿಎಲ್‌ಎ ಅವರ ಜವಾಬ್ದಾರಿ ಹೆಚ್ಚಿನದಾಗಿದ್ದು, ಅವರು ತಮ್ಮ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಜಾಗರೂಕತೆಯಿಂದ ನಿರ್ವಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಇನ್ನಷ್ಟು ಬಲ ಪಡಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹೇಳಿದ್ದಾರೆ.
ಬುಧವಾರ ಕಾಪು ತಾಲೂಕು ಉಚ್ಚಿಲದ ಶ್ರೀಮಹಾಲಕ್ಷ್ಮೀ ದೇವಸ್ಥಾನ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಬಿಎಲ್‌ಓ ಮತ್ತು ಬಿಎಲ್‌ಎಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದ ಯಶಸ್ಸು ಪಾರದರ್ಶಕ ಮತದಾರರ ಪಟ್ಟಿಯ ಮೇಲೆ ಅವಲಂಬಿತವಾಗಿರುತ್ತದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಬಿ.ಎಲ್.ಓ ಹಾಗೂ ಬಿ.ಎಲ್.ಎ ಗಳು ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ನೈಜ ಮತದಾರರು ಯಾವುದೇ ಕಾರಣಕ್ಕೂ ಮತದಾನ ಪ್ರಕ್ರಿಯೆ ಯಿಂದ ವಂಚಿತರಾಗದಂತೆ ವಿಶೇಷ ಎಚ್ಚರ ವಹಿಸಬೇಕಾಗಿದೆ ಎಂದರು.
ಸಂಪೂರ್ಣ ಪರಿಷ್ಕೃತವಾದ ಹೊಸ ಮತದಾರರ ಪಟ್ಟಿಯನ್ನು ತಯಾರಿಸು ವುದರೊಂದಿಗೆ ನ್ಯೂನ್ಯತೆಗಳನ್ನು ಸರಿಪಡಿಸಿ, ಯಾವುದೇ ಅರ್ಹ ಮತದಾರ ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಮಖ್ಯ ಉದ್ದೇಶ ವಾಗಿದೆ ಎಂದ ಅವರು, ತರಬೇತಿಯ ಎಲ್ಲಾ ಅಂಶಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು ಬಿಎಲ್‌ಓ ಹಾಗೂ ಬಿಎಲ್‌ಎಗಳು ಕರ್ತವ್ಯ ನಿರ್ವಹಿಸು ವಂತೆ ಅವರು ತಿಳಿಸಿದರು.
ಭಾರತ ಚುನಾವಣಾ ಆಯೋಗವು ಎಸ್‌ಐಆರ್‌ನ ಅರ್ಹತಾ ದಿನಾಂಕ ಅಕ್ಟೋಬರ್ ಒಂದು ಎಂದು ಘೋಷಿಸಿದೆ. ಜೂನ್ 20ರಿಂದ 29ರವರೆಗೆ ಪೂರ್ವ ತಯಾರಿ, ತರಬೇತಿ ಮತ್ತು ಮುದ್ರಣಕ್ಕೆ ಅವಕಾಶ ಕಲ್ಪಿಸಿದೆ. ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಅಧಿಕಾರಿಯಿಂದ ಮನೆಮನೆ ಭೇಟಿ ಹಾಗೂ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ನಡೆಯಲಿದೆ. ಆಗಸ್ಟ್5 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳು ಜೂ.30ರಿಂದ ಜು.29ರ ವರೆಗೆ ಪೂರ್ವ ಮುದ್ರಿತ ನಮೂನೆಗಳನ್ನು ಪ್ರತಿ ಮನೆಗೆ ಭೇಟಿ ನೀಡಿ, ಪೂರ್ವ ಮಾಹಿತಿಯುಳ್ಳ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಿಸಿ, ಅವುಗಳನ್ನು ಭರ್ತಿ ಮಾಡಲು ಮಾರ್ಗದರ್ಶನ ನೀಡಬೇಕಾಗಿದೆ. ಒಂದೊಮ್ಮೆ ಗಣತಿ ಸಮಯದಲ್ಲಿ ಮತದಾರರ ಮನೆಗೆ ಬೀಗ ಹಾಕಿ ದ್ದರೆ, ಅಧಿಕಾರಿಗಳು ಕನಿಷ್ಠ ಮೂರು ಬಾರಿ ಆ ಮನೆಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಲು ಪ್ರಯತ್ನಿಸಬೇಕು. ಎರಡನೇ ಭೇಟಿಯಲ್ಲಿ ಬಿಎಲ್‌ಒಗಳು ಮತದಾರರು ಭರ್ತಿ ಮಾಡಿದ ಫಾರಂ ಅನ್ನು ಸಂಗ್ರಹಿಸಿ ಸ್ವೀಕೃತಿ ನೀಡು ತ್ತಾರೆ. ನಮೂನೆ ಯಲ್ಲಿ ಮತದಾರರ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿರಬೇಕು ಜೊತೆಗೆ ಭರ್ತಿ ಮಾಡಿದ ಫಾರಂಗಳ ಮೇಲೆ ಮತದಾರರ ಸಹಿ ಅಥವಾ ಹೆಬ್ಬೆರಳ ಗುರುತು ಕಡ್ಡಾಯವಾಗಿರಬೇಕು ಎಂದರು.
ಆ.5ರಿಂದ ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಆ.5ರಿಂದ ಅ.3ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ನೈಜತೆಯನ್ನು ಪರಿಶೀಲಿಸುವ ಕಾರ್ಯ ನಡೆಯಲಿದೆ. ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಸ್ವರೂಪ ಟಿ.ಕೆ. ತಿಳಿಸಿದರು.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಹಾಗೂ ಜಿಲ್ಲಾ ಮಾಸ್ಟರ್ ಟ್ರೈನರ್ ಗಂಗಾಧರ್ ವಿ.ಎ. ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆಯ ವಿವಿಧ ಹಂತಗಳಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ನೀಡುವುದು, ಅಗತ್ಯ ನಮೂನೆಗಳು ಹಾಗೂ ದಾಖಲೆ ಗಳ ಮುದ್ರಣ, ಮತಗಟ್ಟೆಗಳ ಮರುಹೊಂದಿಕೆ, ಮನೆಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹ ಮತ್ತು ಪರಿಶೀಲನೆ, ಕರಡು ಮತದಾರರ ಪಟ್ಟಿಯ ಪ್ರಕಟಣೆ, ಹಕ್ಕು ಮತ್ತು ಆಕ್ಷೇಪಣೆಗಳ ಸ್ವೀಕಾರ, ಅರ್ಜಿಗಳ ಪರಿಶೀಲನೆ ಹಾಗೂ ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ ಸೇರಿದಂತೆ ಎಸ್‌ಐಆರ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ನೀಡಿದರು.
ಬಳಿಕ ಎಸ್‌ಐಆರ್ ಕುರಿತಂತೆ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಬಿಎಲ್‌ಎಗಳ ಸಂದೇಹಗಳಿಗೆ ಜಿಲ್ಲಾಧಿಕಾರಿ ಉತ್ತರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕಾಪು ತಹಶೀಲ್ದಾರ್ ಅನಂತಶಂಕರ ಬಿ, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್‌ಓ, ಬಿಎಲ್‌ಎಗಳು ಹಾಗೂ ಮತ್ತಿತರರು ಇತರರು ಉಪಸ್ಥಿತರಿದ್ದರು.
‘ಪ್ರತಿಕ್ರಿಯೆ ನೀಡದಿದ್ದರೆ ಪಟ್ಟಿಯಲ್ಲಿ ಹೆಸರಿಲ್ಲ’
ಮನೆ ಭೇಟಿ ಸಂದರ್ಭದಲ್ಲಿ ಮತದಾರರು ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಅಥವಾ ಫಾರಂಗಳನ್ನು ಸ್ವೀಕರಿಸದೇ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇರುವುದಿಲ್ಲ. ಎನುಮರೇಷನ್ ಫಾರ್ಮ್ (ಗಣತಿ ನಮೂನೆ) ಗಳನ್ನು ಬಿಎಲ್‌ಓಗಳೇ ವಿತರಿಸಬೇಕು. ಬಿಎಲ್‌ಎಗಳಿಗೆ ಅದನ್ನು ವಿತರಿಸಲು ಅವಕಾಶವಿರುವುದಿಲ್ಲ.
ಭರ್ತಿ ಮಾಡಿದ ನಮೂನೆಯನ್ನು ಮತದಾರರು ಕಡ್ಡಾಯವಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಬೇಕು. ಅಧಿಕಾರಿಗಳು ಭರ್ತಿ ಮಾಡಿದ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದು, ಒಂದು ಪ್ರತಿಗೆ ಸ್ವೀಕೃತಿ ನೀಡಬೇಕು. ಮತದಾರರು ದಾಖಲೆಗಳೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಆನ್‌ಲೈನ್ ಮೂಲಕವೂ ಅಪ್‌ಲೋಡ್ ಮಾಡಬಹುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.






