ಮಣಿಪಾಲ: ಅಪಘಾತ ಪ್ರಕರಣ; ಆರೋಪಿ ಬಂಧನ

ಉಡುಪಿ: ಮಣಿಪಾಲದಲ್ಲಿ ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪಿ ಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಜೂನ್ 19ರಂದು ರಾತ್ರಿ ಕರ್ವಾಲು ನಿವಾಸಿ ಅಭಿಷೇಕ್ ನಾಯಕ್ (21) ತಮ್ಮ ಸ್ಕೂಟಿಯಲ್ಲಿ ಮಣಿಪಾಲದಿಂದ ಕೆಳಪರ್ಕಳದ ಕಡೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 169(ಅ)ಯಲ್ಲಿರುವ ಸಾಯಿಸಾಗರ್ ಹೋಟೆಲ್ ಮುಂಭಾಗ ಎಂಐಟಿ ಕಡೆಯಿಂದ ಬಂದ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ.
ಆರೋಪಿ ಸಮೇಗ್ಸ್ ಎಲ್.ಜೆ. (25) ಮದ್ಯಪಾನ ಮಾಡಿ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಅಪಘಾತದ ಪರಿಣಾಮ ಸ್ಕೂಟಿ ಹಾಗೂ ಕಾರು ಜಖಂ ಗೊಂಡಿದ್ದು, ಅಭಿಷೇಕ್ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿತ್ತು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.




