ಉಡುಪಿ: ಹಾಜಿ ಅಬ್ದುಲ್ಲ ತಾಯಿ-ಮಕ್ಕಳ ಆಸ್ಪತ್ರೆಗೆ ಲಕ್ಷಾಂತರ ರೂ.ಮೌಲ್ಯದ ಸಾಧನ-ಸಲಕರಣೆಗಳ ಕೊಡುಗೆ

ಉಡುಪಿ, ಜೂ.26: ಉಡುಪಿಯಲ್ಲಿರುವ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ಗೆ ಅಗತ್ಯವಿರುವ ಸುಮಾರು ಐದು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸಾಧನ- ಸಲಕರಣೆಗಳನ್ನು ಕೋಟದ ಗೀತಾನಂದ ಪೌಂಡೇಷನ್‌ನ ಪ್ರವರ್ತಕರಾದ ಉದ್ಯಮಿ ಆನಂದ ಸಿ.ಕುಂದರ್ ಹಾಗೂ ಗೀತಾಕುಂದರ್ ದಂಪತಿ ಕೊಡುಗೆ ಯಾಗಿ ನೀಡಿದ್ದಾರೆ.
ಈ ಪ್ರಯುಕ್ತ ಇಂದು ಶುಕ್ರವಾರ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಂಪತಿಗಳನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಆನಂದ್ ಸಿ ಕುಂದರ್, ಶಿಕ್ಷಣ ಮತ್ತು ಆರೋಗ್ಯ ಹಾಗೂ ಪರಿಸರಕ್ಕೆ ಏನಾದರೂ ಸಹಾಯ ಮತ್ತು ಕೊಡುಗೆಯನ್ನು ನೀಡಬೇ ಕೆಂಬುದು ನಮ್ಮ ಉದ್ದೇಶ ಮತ್ತು ಆಶಯವಾಗಿದೆ ಎಂದರು.
ನಮ್ಮ ಸಂಸ್ಥೆಯ ವತಿಯಿಂದ ಪ್ರತಿವರ್ಷ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಸಮವಸ್ತ್ರಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತೇವೆ. ಅಷ್ಟೇ ಅಲ್ಲದೆ ನಾಡಿನ ಪರಿಸರವನ್ನು ಉಳಿಸಲು ಎಲ್ಲಾ ಶಾಲೆಗಳಿಗೆ ಗಿಡಗಳನ್ನು ಉಚಿತವಾಗಿ ನೀಡಿ ಮಕ್ಕಳಿಂದ ಗಿಡ ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬೆಳೆಸುತ್ತೇವೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಂದೀಪ್, ಕುಂದರ್ ದಂಪತಿ ಕೊಡುಗೆಯಾಗಿ ನೀಡಿದ ಸಾಧನ ಸಲಕರಣೆಗಳಿಂದ ಆಸ್ಪತ್ರೆಗೆ ಆಸ್ಪತ್ರೆಗೆ ತುಂಬಾ ಪ್ರಯೋಜನವಾಗಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಿಲ್ಲಾ ಸರ್ಜನರಾದ ಡಾ.ಎಚ್.ಅಶೋಕ್ ಮಾತನಾಡಿ, ನಮ್ಮ ತಾಯಿ- ಮಕ್ಕಳ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಸುಮಾರು 5 ಲಕ್ಷ ರೂ.ಗಳ ಸಾಧನ ಸಲಕರಣೆಗಳ ಅಗತ್ಯವಿದೆ ಎಂದು ಉದ್ಯಮಿಗಳಾದ ಆನಂದ ಕುಂದರಂ ಅವರಲ್ಲಿ ವಿನಂತಿಸಿ ದಾಗ ಅವರು ಕೂಡಲೇ ಅಗತ್ಯವಿರುವ 5,01,648 ರೂ.ಗಳ ಚೆಕ್ಕನ್ನು ನೀಡಿದರು. ಇದರಿಂದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ತುಂಬಾ ಸಹಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಡಾ. ಅಮರನಾಥ ಶಾಸ್ತ್ರಿ, ಡಾ. ಮಹದೇವ ಭಟ್ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ರೇಣುಕಾ, ಇಂಜಿನಿಯರ್ ಪ್ರಕಾಶ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಸ್ಪತ್ರೆಯ ಆಪ್ತ ಸಮಾಲೋಚಕ ಮನು ಎಸ್ ಬಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.






