ಭಾರತದಲ್ಲಿ ಸಹಕಾರಿ ಕ್ಷೇತ್ರದಿಂದ ಕ್ರಾಂತಿಕಾರಿ ಬದಲಾವಣೆ: ಸಿಂಧ್ಯಾ

ಉಡುಪಿ: ಭಾರತದಲ್ಲಿ ಸಹಕಾರಿ ಕ್ಷೇತ್ರ ಕ್ರಾಂತಿಕಾರಿ ಕೆಲಸ ಮಾಡುತ್ತಿದೆ. ವಾಣಿಜ್ಯ ಬ್ಯಾಂಕ್‌ಗಳಿಗೆ ಸಮಾನಾಂತರ ವಾಗಿರುವ ಸಹಕಾರಿ ಕ್ಷೇತ್ರವು ಕರ್ನಾಟಕದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಬಹಳಷ್ಟು ಸಹಕಾರ ನೀಡುತ್ತಿದೆ ಎಂದು ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದ್ದಾರೆ.
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಉಡುಪಿ ಪುರಭವನದಲ್ಲಿ ಶನಿವಾರ ಆಯೋಜಿಸ ಲಾದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರ ಗಳ ವಿತರಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಸಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಮಾತನಾಡಿದರು.
ವಿದ್ವಾನ್ ದಾಮೋದರ್ ಶರ್ಮ ಬಾರಕೂರು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳ 2025-26ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ 24 ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ 5ಲಕ್ಷ ರೂ. ಅಧಿಕ ಮೊತ್ತದ ಸಹಾಯಧನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲೆಯ 45 ಕನ್ನಡ ಮಾಧ್ಯಮ ಶಾಲೆಗಳ ನೋಟ್ ಪುಸ್ತಕಗಳನ್ನು, 8 ಶಾಲೆಗಳಿಗೆ ಸಮವಸ್ತ್ರ ಗಳನ್ನು ವಿತರಿಸಲಾಯಿತು. ಆರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ಕಲಿಕೋಪಕರಣಗಳನ್ನು ನೀಡ ಲಾಯಿತು. ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್ ಸಿಸ್ಟಮ್ ಕೊಡುಗೆಯಾಗಿ ನೀಡಲಾಯಿತು. ಶಾಲಾ ಶಿಕ್ಷಕರಿಗೆ ಕೊಡೆಗಳನ್ನು ವಿತರಿಸಲಾಯಿತು.
ಸೊಸೈಟಿಯ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ಉಮಾನಾಥ್, ಜಯ ಶೆಟ್ಟಿ, ಗಾಯತ್ರಿ ಭಟ್ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್, ಸಹಾಯಕ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಹಾಗೂ ಕುಂದಾಪುರ ಶಾಖಾ ವ್ಯವಸ್ಥಾಪಕ ಸಮರ್ಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.






