ಯೋಗಾಭ್ಯಾಸ ಜೀವನಶೈಲಿ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ: ಡಾ.ರಫೀಕ್

ಉಡುಪಿ, ಜೂ.27: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಐಕ್ಯೂಎಸಿ, ಸ್ವಸ್ಥವೃತ್ತ ಮತ್ತು ಯೋಗ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ ಶಿಬಿರವನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಹೂಡೆಯ ಬೀಚ್ ಹೀಲಿಂಗ್ ಆರೋಗ್ಯ ಕೇಂದ್ರದ ನಿರ್ದೇಶಕ ಡಾ.ಮಹಮ್ಮದ್ ರಫೀಕ್ ಮಾತನಾಡಿ, ಯೋಗ ಇಂದು ಬಹಳ ಜನಪ್ರಿಯತೆಯನ್ನು ಪಡೆಯುತ್ತಿದ್ದು ಎಲ್ಲರ ದಿನಂಪ್ರತಿಯ ಹವ್ಯಾಸವಾಗಲಿ ಮತ್ತು ನಿತ್ಯ ಯೋಗಾಭ್ಯಾಸವು ಜೀವನಶೈಲಿ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದು ಸಂಶೋಧ ನೆಗಳಿಂದ ತಿಳಿಯಲ್ಪಟ್ಟಿದೆ. ಸುಖಕರ ವೃದ್ದಾಪ್ಯಕ್ಕೆ ಯೋಗವು ಮಹತ್ವದ್ದಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ವಹಿಸಿದ್ದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಶ್ರೀಕಾಂತ್ ಪಿ., ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಡಾ.ಯೋಗೀಶ ಆಚಾರ್ಯ, ಡಾ.ಸಂದೇಶ್ ಕುಮಾರ್ ಶೆಟ್ಟಿ, ಡಾ.ಶ್ರೀನಿಧಿ ಧನ್ಯ ಬಿ.ಎಸ್., ಡಾ.ಸೌಮ್ಯಾ ಭಟ್, ಡಾ.ಲಿಖಿತಾ ಮೊದಲಾದವರು ಉಪಸ್ಥಿತರಿದ್ದರು.
ಸ್ವಸ್ಥವೃತ್ತ ಮತ್ತು ಯೋಗ ವಿಭಾಗದ ಮುಖ್ಯಸ್ಥ ಡಾ.ವಿಜಯ್ ಬಿ. ನೆಗಳೂರು ಸ್ವಾಗತಿಸಿದರು. ಸ್ನಾತಕೊತ್ತರ ವಿದ್ಯಾರ್ಥಿಗಳಾದ ಡಾ.ಶ್ವೇತ ಮತ್ತು ಡಾ.ರಾಜರತ್ನಂ ಕಾರ್ಯಕ್ರಮ ನಿರೂಪಿಸಿದರು. ಡಾ.ಚೇತನಾ ವಂದಿಸಿದರು.






