ವಿವಿಧ ಸಮಿತಿಗಳ ರಚನೆ - ಸಮಾಲೋಚನಾ ಸಭೆ

ಉಡುಪಿ, ಜೂ.29: ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕು ಉಪ್ಪೂರಿನಲ್ಲಿ 1.11 ಎಕ್ರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ವಯೋವಂದನ ಆತಿಥ್ಯ ಗೃಹ ಯೋಜನೆಗೆ ಸಂಬಂಧಿಸಿ ನಿರ್ಮಾಣ ಯೋಜನೆಯ ವಿವಿಧ ಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆಯನ್ನು ಉಡುಪಿಯ ಶ್ರೀ ಪದ್ಮಾವತಿ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಸಭೆಯನ್ನು ಉಡುಪಿ ಶ್ರೀಲಕ್ಷ್ಮಿ ವೆಂಕಟೇಶ ದೇವಸ್ಥಾನದ ನೂತನ ವಿಶ್ವಸ್ಥ ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ಉದ್ಘಾಟಿಸಿದರು. ಉಡುಪಿಯ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಮತ್ತು ಮೂಡಬಿದ್ರೆ ವಿಜಯ್ ಕುಮಾರ್ ಶೆಣೈ ವಯೋವಂದನ ಯೋಜನೆಯ ಕಟ್ಟಡ ನಿರ್ಮಾಣದ ಪೂರ್ವಭಾವಿ ಸಿದ್ಧತೆ, ಯೋಜನೆಯ ನಿರ್ವಹಣೆಯ ಖರ್ಚು ವೆಚ್ಚದಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಡಾ.ರಾಜ್‌ಗೋಪಾಲ್ ಶೆಣೈ ಉಡುಪಿ ಮತ್ತು ಮಂಗಳೂರಿನ ಲೆಕ್ಕಪರಿಶೋಧಕ ಸಿಎ ಎಸ್.ಎಸ್.ನಾಯಕ್ ಮಾತನಾಡಿ ದರು. ಡಾ.ಪಿ.ದಯಾನಂದ ಪೈ ಸಾರ್ಥಕ ಬದುಕಿನ ಸಾಕ್ಷಾತ್ಕಾರ ಎಂಬ ಪುಸ್ತಕದ ಸಂಪಾದಕಿ ಕಾರ್ಕಳದ ಪ್ರಜ್ವಲಾ ಶೆಣೈ ಅವರನ್ನು ಸನ್ಮಾನಿಸ ಲಾಯಿತು.
ವೇದಿಕೆಯಲ್ಲಿ ಉಡುಪಿಯ ಸರ್ಜನ್ ಡಾ.ಸುರೇಶ್ ಶೆಣೈ, ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದ ವಿಶ್ವಸ್ಥ ಕೆ.ಕರಾಮರಾಯ ಕಿಣಿ, ಉಡುಪಿ ಶ್ರೀಲಕ್ಷ್ಮಿ ವೆಂಕಟೇಶ ದೇವಸ್ಥಾನದ ವಿಶ್ವಸ್ಥ ಮಹೇಶ ಶೆಣೈ, ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ, ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷೆ ಸೀಮಾ ಎಸ್.ಪೈ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವೇದಮೂರ್ತಿ ಚೇಂಪಿ ರಾಮಚಂದ್ರ ಅನಂತ ಭಟ್ ವಹಿಸಿದ್ದರು. ಬಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಸತೀಶ್ ಹೆಗಡೆ ಸ್ವಾಗತಿಸಿದರು. ವೇದಿಕೆಯ ಸಂಚಾಲಕ ಆರ್.ವಿವೇಕಾನಂದ ಶೆಣೈ ಪ್ರಸ್ತಾವನೆ ಗೈದರು. ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ರಾಮತ್ ಕಾರ್ಯಕ್ರಮ ನಿರೂಪಿಸಿದರು. ಕಾಪು ಹರೀಶ್ ನಾಯಕ್ ವಂದಿಸಿದರು.






