ಗಂಗೊಳ್ಳಿ: ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಗಂಗೊಳ್ಳಿ, ಜು.1: ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಬಾರಂದಾಡಿ ಗ್ರಾಮದ ದೇವಲ್ಕುಂದ ಎಂಬಲ್ಲಿ ನಡೆದಿದೆ.
ಮೃತರನ್ನು ಕುಂದಬಾರಂದಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ನಿವಾಸಿ ವಸಂತ ಬಂಗೇರ (56) ಎಂದು ಗುರುತಿಸಲಾಗಿದೆ. ಇವರು, ಜೂ.29ರಂದು ಮನೆಯಿಂದ ಕೃಷಿ ಕೂಲಿ ಕೆಲಸಕ್ಕೆ ಹೋದವರು ವಾಪಾಸ್ಸು ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಜು.1ರಂದು ಬೆಳಗ್ಗೆ ದೇವಲ್ಕುಂದ ಎಂಬಲ್ಲಿ ಆವರಣ ಇಲ್ಲದ ಬಾವಿಯಲ್ಲಿ ವಸಂತ ಅವರ ಮೃತದೇಹ ಪತ್ತೆಯಾಗಿದೆ.
ಇವರು ಕೃಷಿ ಕೆಲಸಕ್ಕೆ ಹೋದವರು ಬಾವಿಯ ಬಳಿಯ ಕಾಲು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




