ಡಾ.ಜಿ.ಕೆ.ಹೆಗಡೆ ಹರಿಕೇರಿ ಸೇರಿ ಮೂವರಿಗೆ ಕಲಾರಂಗ ಅರ್ಥಧಾರಿ ಪ್ರಶಸ್ತಿ

ಡಾ.ಜಿ.ಕೆ.ಹೆಗಡೆ, ಕೋಟೆ ರಾಮ ಭಟ್ಟ, ವೆಂಕಟರಮಣ ಭಟ್ಟ
ಉಡುಪಿ, ಜು.2: ಉಡುಪಿ ಯಕ್ಷಗಾನ ಕಲಾರಂಗವು ತಾಳಮದ್ದಲೆ ಅರ್ಥಧಾರಿಗಳು ಹಾಗೂ ಯಕ್ಷಗಾನ ವಿದ್ವಾಂಸರಿಗೆ ನೀಡುವ ವಿವಿಧ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಹೊನ್ನಾವರದ ಜಿ.ಕೆ.ಹೆಗಡೆ, ಕಾರ್ಕಳದ ಕೋಟೆ ರಾಮ ಭಟ್ ಹಾಗೂ ಸುಳ್ಯದ ವೆಂಕಟರಾಮ ಭಟ್ಟರನ್ನು ಆಯ್ಕೆ ಮಾಡಲಾಗಿದೆ.
ಕಲಾಪೋಷಕ ಮಟ್ಟಿ ಮುರಲೀಧರ ರಾವ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯನ್ನು ಡಾ.ಜಿ.ಕೆ.ಹೆಗಡೆ ಹರಿಕೇರಿ, ತಾಳಮದ್ದಲೆ ಅರ್ಥಧಾರಿ ಹಾಗೂ ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ಕಾರ್ಕಳದ ಕೋಟೆ ರಾಮ ಭಟ್ ಹಾಗೂ ಇದೇ ಮೊದಲ ಬಾರಿಗೆ ಹೊರನಾಡಿನ ಭೀಮೇಶ್ವರ ಜೋಶಿ ಅವರು ತನ್ನ ಅಜ್ಜ ಡಿ.ಬಿ. ವೆಂಕಟಸುಬ್ಬಾ ಜೋಯಿಸರ ನೆನಪಿನಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ಸುಳ್ಯದ ವೆಂಕಟರಾಮ ಭಟ್ಟರನ್ನು ಆಯ್ಕೆ ಮಾಡಲಾಗಿದೆ ಎಂದು ಯಕ್ಷಗಾನ ಕಲಾರಂಗದ ಪ್ರಕಟಣೆ ತಿಳಿಸಿದೆ.
ಇದೇ ಜುಲೈ 11ರ ಶನಿವಾರ ಸಂಜೆ 4 ಗಂಟೆಗೆ ಕಲಾರಂಗ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಅಪರಾಹ್ನ 1:00ರಿಂದ 4:00 ಗಂಟೆಯವರೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀರಂಗ ತುಲಾಭಾರ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಮೂರು ಪ್ರಶಸ್ತಿಗಳು ತಲಾ 20,000ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿ ರುತ್ತವೆ ಎಂದು ಅವರು ತಿಳಿಸಿದ್ದಾರೆ.






