ಉಡುಪಿ: ರೈಲ್ವೆ ಸಿಬ್ಬಂದಿಗಳಿಂದ ಐವರು ಅಪ್ರಾಪ್ತ ಬಾಲಕರ ರಕ್ಷಣೆ

ಉಡುಪಿ, ಜು.2: ವಿವಿಧ ಕಾರಣಗಳಿಂದ ಮನೆಯಿಂದ ಓಡಿ ಬಂದಿದ್ದ ಐವರು ಅಪ್ರಾಪ್ತ ಬಾಲಕರನ್ನು ಪತ್ತೆ ಹಚ್ಚಿದ ಕೊಂಕಣ ರೈಲ್ವೆಯ ಸಿಬ್ಬಂದಿಗಳು ಹಾಗೂ ರೈಲ್ವೆ ಪೊಲೀಸರು ಅವರನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ ಘಟನೆ ಮುಂಬಯಿ ಮತ್ತು ಮಂಗಳೂರು ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ಉಡುಪಿ ರೈಲು ನಿಲ್ದಾಣದಿಂದ ವರದಿಯಾಗಿದೆ.
ರೈಲು ನಂ.12619 ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾರಕೂರು ಮತ್ತು ಉಡುಪಿ ನಿಲ್ದಾಣಗಳ ಮಧ್ಯೆ ಟಿಕೆಟ್ ತಪಾಸಣೆ ನಡೆಸುತ್ತಿದ್ದ ಟಿಟಿಇ ಸವಿತಾ ಶೆಟ್ಟಿ ಅವರು ಸಾಮಾನ್ಯ ಬೋಗಿಯಲ್ಲಿದ್ದ ಐವರು ಬಾಲಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದನ್ನು ಪತ್ತೆಹಚ್ಚಿದ್ದರು. ಅವರೆಲ್ಲರ ಚಲನವಲನಗಳು ಮತ್ತು ನಡವಳಿಕೆ ಸಂಶಯಾಸ್ಪದವಾಗಿ ಕಾಣಿಸಿದ್ದರಿಂದ ಸವಿತಾ ಶೆಟ್ಟಿ ಅವರು ತಕ್ಷಣ ಉಡುಪಿಯಲ್ಲಿದ್ದ ರೈಲ್ವೆ ಪೊಲೀಸ್ ಪಡೆಯ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು.
ರೈಲು ಉಡುಪಿ ನಿಲ್ದಾಣಕ್ಕೆ ಬಂದು ತಲುಪುತ್ತಿದ್ದಂತೆ ಸಿದ್ಧವಾಗಿದ್ದ ರೈಲ್ವೆ ಪಡೆಯ ಕಾನ್‌ಸ್ಟೇಬಲ್ ಮುರಳಿಧರನ್ ತಕ್ಷಣವೇ ಬೋಗಿಗೆ ಬಂದು ಐವರು ಬಾಲಕರನ್ನು ಕೌನ್ಸಿಲಿಂಗ್ ಹಾಗೂ ವಿಚಾರಣೆಗಾಗಿ ವಶಕ್ಕೆ ಪಡೆದು, ಸುರಕ್ಷಿತವಾಗಿ ಕೆಳಗೆ ಇಳಿಸಿ ಆರ್‌ಪಿಎಫ್ ಚೌಕಿಗೆ ಕರೆತಂದರು.
ರೈಲ್ವೆ ಪೊಲೀಸ್ ಅಧಿಕಾರಿಗಳು ನಯವಾಗಿ ಅವರ ವಿಚಾರಣೆ ನಡೆಸಿದಾಗ ಬಾಲಕರೆಲ್ಲರೂ ಕೌಟುಂಬಿಕ ಕಾರಣ ಗಳಿಗೆ ಯಾರಿಗೂ ತಿಳಿಸದೆ ಮನೆಯಿಂದ ಓಡಿಬಂದಿರುವುದು ಅರಿವಿಗೆ ಬಂದಿದೆ. ಅಲ್ಲಿ ಮಕ್ಕಳಿಗೆ ಉಪಹಾರ ಹಾಗೂ ಕುಡಿಯಲು ಪಾನೀಯಗಳನ್ನು ಒದಗಿಸಲಾಯಿತು. ಮಕ್ಕಳು ಅಪ್ರಾಪ್ತರಾಗಿದ್ದ ರಿಂದ ಎಲ್ಲಾ ಮಕ್ಕಳನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಈ ಬಾಲಕರು ಬೆಂಗಳೂರಿನವರೆಂದು ವಿಚಾರಣೆ ವೇಳೆ ತಿಳಿದುಬಂದಿದ್ದು, ಅವರನ್ನು ಸುರಕ್ಷತೆಗಾಗಿ ಬಾಲಕರ ಬಾಲಮಂದಿರದಲ್ಲಿ ಇರಿಸಿದ್ದು, ಅವರವರ ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಗುರುವಾರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದ ಪೋಷಕರು ದಾಖಲೆಗಳನ್ನು ಸಲ್ಲಿಸಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.






