ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡಿ: ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ

ಉಡುಪಿ, ಜು.2: ಕಥೊಲಿಕ್ ಸಭಾ ಉಡುಪಿ ಹಾಗೂ ಮಂಗಳೂರು ಪ್ರದೇಶದ ನಿಯೋಗವೊಂದು ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಿತು.
ಇದೇ ವೇಳೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರಿಗೆ ಕ್ರೈಸ್ತ ಸಮುದಾಯದಿಂದ ಸಚಿವ ಸ್ಥಾನ ನೀಡು ವಂತೆ ಆಗ್ರಹಿಸಿ ಕಥೊಲಿಕ್ ಸಭಾ ಮಂಗಳೂರು ಹಾಗೂ ಉಡುಪಿ ಪ್ರದೇಶ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಕರಾವಳಿಯಲ್ಲಿ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಐವನ್ ಡಿಸೋಜಾ ಅವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಪರಿಷತ್ ಮುಖ್ಯ ಸಚೇತಕರಾಗಿ ಕ್ರೈಸ್ತ ಅಭಿವೃದ್ದಿ ನಿಗಮದಲ್ಲಿ ವಿವಿಧ ರೀತಿಯ ಜವಾಬ್ದಾರಿ ಯನ್ನು ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿಗೆ ಕ್ರೈಸ್ತ ಸಮುದಾಯದ ಕೊಡುಗೆ ಅಪಾರವಾಗಿದ್ದು ರಾಜ್ಯದ 22 ಜಿಲ್ಲೆಗಳಲ್ಲಿ ಕ್ರೈಸ್ತ ಸಮುದಾಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ ಎಂದು ನಿಯೋಗ ಮನವಿಯಲ್ಲಿ ಹೇಳಿದೆ.
ಪ್ರತಿ ಬಾರಿ ಉನ್ನತ ಸ್ಥಾನಗಳನ್ನು ನೀಡುವಾಗ ಸಮುದಾಯ ಅವಕಾಶ ವಂಚಿತವಾಗುತ್ತಿದ್ದು ಮುಖ್ಯಮಂತ್ರಿಗಳು ಎಲ್ಲಾ ಸಮುದಾಯಗಳಿಗೂ ಸಮಾನ ಅವಕಾಶ ನೀಡುವ ಕೆಲಸವನ್ನು ಮಾಡಬೇಕು. ಈ ಮೂಲಕ ಐವನ್ ಡಿಸೋಜಾ ಅವರಿಗೆ ಸಚಿವ ಸ್ಥಾನವನ್ನು ಅಥವಾ ವಿಧಾನಪರಿಷತ್ ಸಭಾಪತಿ ಯಾಗಿ ನೇಮಕ ಮಾಡಬೇಕು. ಈ ಮೂಲಕ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುವಂತೆ ಮನವಿ ಮಾಡಿದರು.
ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷರಾದ ಸಂತೋಷ್ ಡಿಸೋಜಾ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ಸುನಿಲ್ ಮೋನಿಸ್, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹ ಶಿರ್ವ, ಕುಂದಾಪುರ ವಲಯಾಧ್ಯಕ್ಷೆ ಶೈಲಾ ಅಲ್ಮೇಡಾ, ಕಾರ್ಕಳ ಅಧ್ಯಕ್ಷ ಅಂಟನಿ ಮಿರಾಂದಾ, ಉಡುಪಿ ಅಧ್ಯಕ್ಷ ಕಿರಣ್ ಲೂವಿಸ್, ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಹಾಗೂ ಇತರರು ಉಪಸ್ಥಿತರಿದ್ದರು.






