ಉಡುಪಿ: ಮಳೆಯೇ ಇಲ್ಲ... ಬಿಸಿಲೇ ಎಲ್ಲಾ

ಉಡುಪಿ, ಜು.2: ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗೆ ಎರಡು ದಿನ ರೆಡ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದ್ದರೂ, ಇಂದು ಹಗಲಿನಲ್ಲಿ ಮಳೆಯ ಸುದ್ದಿಯೇ ಇರಲಿಲ್ಲ. ಬದಲಿಗೆ ಆಗಾಗ ಬಿಸಿಲು ಕಾಣಿಸಿಕೊಂಡಿತ್ತು. ಸಂಜೆಯ ಬಳಿಕ ಮತ್ತೆ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ.
ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಎರಡು ಪ್ರಕರಣಗಳು ವರದಿ ಯಾಗಿವೆ. ಬೈಂದೂರು ತಾಲೂಕಿನ ಹಡವು ಗ್ರಾಮದಲ್ಲಿ ಫ್ರಾನ್ಸಿಸ್ ಒಲಿವೆರಾ ಅವರ ಮನೆಯ ಮೇಲೆ ಮರ ಬಿದ್ದು 35ಸಾವಿರ ರೂ.ನಷ್ಟವಾದರೆ, ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಅಂತಮ್ಮ ಶೆಡ್ತಿಯವರ ಮನೆ ಮೇಲೆ ಮರಬಿದ್ದು 30ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕು ಉಳ್ಳೂರು ಗ್ರಾಮದ ಸತೀಶ್ ಆಚಾರ್ಯ ಎಂಬವರ ಮನೆಯ ತೋಟದ ಬೆಳೆಗಳು ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು, 30ಸಾವಿರ ರೂ.ಗಳಷ್ಟು ನಷ್ಟವಾಗಿರುವುದಾಗಿ ಹೇಳಲಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 40.9ಮಿ.ಮೀ.ಮಳೆಯಾಗಿದೆ. ಬೈಂದೂರಿನಲ್ಲಿ ಅತ್ಯಧಿಕ 95.9 ಮಿ.ಮೀ. ಮಳೆಯಾಗಿದೆ. ಉಳಿದಂತೆ ಕುಂದಾಪುರದಲ್ಲಿ 46.5, ಕಾರ್ಕಳದಲ್ಲಿ 30.5, ಹೆಬ್ರಿಯಲ್ಲಿ 27.4, ಕಾಪುವಿನಲ್ಲಿ 17.5, ಉಡುಪಿಯಲ್ಲಿ 17.0 ಹಾಗೂ ಬ್ರಹ್ಮಾವರದಲ್ಲಿ 14.4ಮಿ.ಮೀ. ಮಳೆಯಾದ ವರದಿ ಬಂದಿದೆ.






