ಭವಿಷ್ಯನಿಧಿ ಪಿಂಚಣಿದಾರರ ಪಿಂಚಣಿ ಹೆಚ್ಚಳಕ್ಕೆ ಹೋರಾಟ ಒಂದೇ ದಾರಿ: ಸುಕುಮಾರ್ ತೊಕ್ಕೊಟ್ಟು

ಉಡುಪಿ, ಜು.5: ಭವಿಷ್ಯನಿಧಿ ಪಿಂಚಣಿದಾರರ ಕನಿಷ್ಠ ಪಿಂಚಣಿಯನ್ನು 2014ರಲ್ಲಿ 1000ರೂ. ನಿಗದಿ ಪಡಿಸಲಾ ಗಿದ್ದು, ಕಳೆದ 12ವರ್ಷಗಳಿಂದ ನಯಾ ಪೈಸೆ ಕೂಡ ಹೆಚ್ಚಳ ಮಾಡಿಲ್ಲ. ಈ ಪಿಂಚಣಿಯನ್ನು ಹೆಚ್ಚಿಸಲು ಬೀದಿಗೆ ಇಳಿದು ಹೋರಾಟ ಮಾಡುವುದು ಒಂದೇ ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಿಂಚಣಿದಾರ ಸಂಘದ ಪ್ರಧಾನ ಕಾರ್ಯದರ್ಶಿ ಸುಕುಮಾರ್ ತೊಕ್ಕೊಟ್ಟು ಹೇಳಿದ್ದಾರೆ.
ಉಡುಪಿ ವಲಯ ಭವಿಷ್ಯ ನಿಧಿ ಪಿಂಚಣಿದಾರರ ಸಂಘ(ಸಿಐಟಿಯು) ವತಿಯಿಂದ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಭವಿಷ್ಯ ನಿಧಿ ಪಿಂಚಣಿದಾರರ ಉಡುಪಿ ವಲಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಮಿಕರ ಭವಿಷ್ಯಕ್ಕಾಗಿ 1952ರಲ್ಲಿ ಭವಿಷ್ಯ ನಿಧಿಯನ್ನು ಸರಕಾರ ಸ್ಥಾಪಿಸಿದ್ದು, 1995ರಲ್ಲಿ ಇದರಲ್ಲಿ ಪಿಂಚಣಿ ಯೋಜನೆಯನ್ನು ಆರಂಭಿಸ ಲಾಯಿತು. ಇದಕ್ಕೆ ಹಣವನ್ನು ಕೇಂದ್ರ ಅಥವಾ ರಾಜ್ಯ ಸರಕಾರ ನೀಡದೆ ಕಾರ್ಮಿಕರ ಸಂಬಂಳದಿಂದಲೇ ಕಡಿತ ಮಾಡಲಾಗುತ್ತದೆ. ಅದಕ್ಕೆ ಮಾಲಕರ ಹಣ ಸೇರಿಸಿ ಭವಿಷ್ಯ ನಿಧಿಯನ್ನು ಪಾವತಿಸಲಾ ಗುತ್ತದೆ. 2014ರಲ್ಲಿ ಕನಿಷ್ಠ ಪಿಂಚಣಿಯನ್ನು 1000ರೂ. ನಿಗದಿ ಮಾಡಲಾಯಿತು ಎಂದರು.
ದೇಶದಲ್ಲಿ 75ಲಕ್ಷ ಮಂದಿ ಭವಿಷ್ಯ ನಿಧಿಯಲ್ಲಿ ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ ಬಹುತೇಕ ಮಂದಿ ಕನಿಷ್ಠ ಪಿಂಚಣಿಯ ಒಳಗೆ ಬರುವವರು ಆಗಿದ್ದಾರೆ. ಉಳಿದಂತೆ ಹೆಚ್ಚುವರಿ ಪಿಂಚಣಿ ಪಡೆಯುವವರು ಕೂಡ ಇದ್ದಾರೆ. ಭವಿಷ್ಯ ನಿಧಿಯಲ್ಲಿ ಸುಮಾರು 10ಸಾವಿರ ಕೋಟಿ ರೂ. ಹಣ ಕ್ಲೈಮ್ ಆಗದೇ ಉಳಿದುಕೊಂಡಿದೆ. ಇದನ್ನು ಪಡೆ ಯಲು ಆ ವ್ಯಕ್ತಿಗಳೇ ಇಲ್ಲ. ಆ ಹಣವನ್ನು ಪಿಂಚಣಿಗೆ ವರ್ಗಾಯಿಸಲು ಆಡಳಿತ ಮಂಡಳಿ ನಿರಾ ಕರಿಸುತ್ತಿದೆ. ಈ ಹಣ ವರ್ಗಾಯಿಸಿದರೆ ಪಿಂಚಣಿ ಮೊತ್ತವನ್ನು ಹೆಚ್ಚಳ ಮಾಡಲು ಅವಕಾಶ ಸಿಗುತ್ತದೆ ಎಂದು ಅವರು ತಿಳಿಸಿದರು.
2014ರಲ್ಲಿ ನಿಗದಿ ಪಡಿಸಿದ ಪಿಂಚಣಿ ಮೊತ್ತವನ್ನು 12ವರ್ಷಗಳ ನಂತರ ಅಂದರೆ 2026ರಲ್ಲಿಯೂ ಅಷ್ಟೇ ನೀಡಲಾಗುತ್ತಿದೆ. ಪಿಂಚಣಿದಾರರಲ್ಲಿ ಬಹುತೇಕರು ಹಿರಿಯ ನಾಗರಿಕರು. ಅವರಿಗೆ ಮುಖ್ಯವಾಗಿ ಆರೋಗ್ಯದ ಸಮಸ್ಯೆಗಳಿಗೆ ಈ ಪಿಂಚಣಿ ಬಳಕೆ ಆಗುತ್ತದೆ. ಆದರೆ ಔಷಧಿ ಬೆಲೆ ಏರಿಕೆ, ಆಸ್ಪತ್ರೆ ಶುಲ್ಕಗಳ ಏರಿಕೆಯಿಂದ ಆ ಪಿಂಚಣಿ ಹಣ ಸಾಕಾಗುತ್ತಿಲ್ಲ ಎಂದು ಅವರು ಹೇಳಿದರು.
ಭವಿಷ್ಯ ನಿದಿ ಪಿಂಚಣಿದಾರರ ಪಿಂಚಣಿ ಹೆಚ್ಚು ಮಾಡಲು ಸಂಘಟನೆ ಹಾಗೂ ಹೋರಾಟ ಮಾಡದಿದ್ದರೆ ಬೇರೆ ದಾರಿಯೇ ಇಲ್ಲ. ಈ ಬಗ್ಗೆ ಸಂಸದರು, ಶಾಸಕರು, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕು. ಅದಕ್ಕೆ ಸಂಘಟನೆ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಅತಿಥಿಗಳಾಗಿ ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಶಿಧರ್ ಗೊಲ್ಲ, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಜಿಲ್ಲಾ ಕೋಶಾಧಿಕಾರಿ ಬಲ್ಕೀಸ್, ಪಿಂಚಣಿದಾರರ ಸಂಘದ ಅಧ್ಯಕ್ಷೆ ಲಲಿತಾ ಸುವರ್ಣ ಗರಡಿಮಜಲು ಉಪಸ್ಥಿತರಿದ್ದರು.
ಕಾರ್ಯದರ್ಶಿ ಉಮೇಶ್ ಕುಂದರ್ ವರದಿ ವಾಚಿಸಿ, ಲೆಕ್ಕಚಾರ ಮಂಡಿಸಿದರು. ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷಕ್ಕೆ 19ಜನರ ಹೊಸ ಸಮಿತಿ ಆಯ್ಕೆ ಮಾಡಲಾಯಿತು. ನಳಿನಿ ಎಸ್. ನಿರ್ಣಯ ಮಂಡಿಸಿದರು. ಸರೋಜ ಎಸ್. ವಂದಿಸಿದರು.
‘ಉಡುಪಿ ಜಿಲ್ಲೆಯಲ್ಲಿ 25000ಕ್ಕೂ ಅಧಿಕ ಪಿಂಚಣಿದಾರರು ಇದ್ದಾರೆ. ಆದರೆ ಇಲ್ಲಿ ಭವಿಷ್ಯ ನಿಧಿ ಕಚೇರಿ ಕೂಡ ಇಲ್ಲ. ಸಂಘಟನೆ ಮೂಲಕ ಹೋರಾಟ ಮಾಡದೆ ಇದ್ದರೆ ನಮಗೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯ ಇಲ್ಲ’
-ಸುಕುಮಾರ್ ತೊಕ್ಕೊಟ್ಟು, ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪಿಂಚಣಿದಾರರ ಸಂಘ
‘ಪಿಂಚಣಿಗೆ ಪ್ರತಿವರ್ಷ ಡಿಎ ಸೇರಿಸಿ’
ಈಗ ನಿಗದಿ ಪಡಿಸಿರುವ ಪಿಂಚಣಿಗೆ ಪ್ರತಿವರ್ಷ ಬೆಲೆ ಏರಿಕೆ ಆಗು ವಂತಹ ಅಂಶ(ಡಿಎ)ವನ್ನು ಸೇರಿಸಬೇಕು. ಇದನ್ನು ಪ್ರತಿವರ್ಷ ಸರಕಾರವೇ ಮಾರ್ಚ್‌ನಲ್ಲಿ ಪ್ರಕಟಿಸುತ್ತದೆ. ಅದರ ಆಧಾರದಲ್ಲಿ ಮಾಡಿದರೆ ಕ್ರಮೇಣ ಪಿಂಚಣಿ ಹೆಚ್ಚಾಗುತ್ತದೆ. ಇದು ನಮ್ಮ ಮುಖ್ಯ ಬೇಡಿಕೆಯಾಗಿದೆ ಎಂದು ಸುಕುಮಾರ್ ತೊಕ್ಕೊಟ್ಟು ತಿಳಿಸಿದರು.
ಅದೇ ರೀತಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡಿ ಉಚಿತ ಅಥವಾ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸಬೇಕು. ಪಿಂಚಣಿ ಯೋಜನೆಯಲ್ಲಿ ರದ್ದು ಮಾಡಲಾದ ಆರ್‌ಓಸಿ ಮತ್ತು ಕಮುಟೆಷನ್ ವ್ಯವಸ್ಥೆಯನ್ನು ಮರು ಸ್ಥಾಪನೆ ಮಾಡಬೇಕು ಎಂದು ಅವರು ಆಗ್ರಹಿಸಿದರು.






