ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಸಾಗಾಣಿಕೆಗೆ ತಡೆ: ಸಂಸದ ರಾಘವೇಂದ್ರ ನೇತೃತ್ವದ ನಿಯೋಗದಿಂದ ಮಹಾರಾಷ್ಟ್ರ ಸಿಎಂ ಭೇಟಿ

ಕುಂದಾಪುರ: ಸೂಕ್ತ ದಾಖಲೆಗಳನ್ನು ಹೊಂದಿರುವ ರಾಜ್ಯದ ಅಡಿಕೆ ಸಾಗಾಣಿಕೆಯ ಸರಕು ವಾಹನಗಳಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ರಾಜ್ಯದ ಸಂಸದರು ಹಾಗೂ ಅಡಿಕೆ ಸಹಕಾರಿಗಳ ನಿಯೋಗವೊಂದು ಇಂದು ಹೊಸದಿಲ್ಲಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ನಿಯೋಗವು ಸಂಕಷ್ಟದಲ್ಲಿರುವ ರಾಜ್ಯದ ಅಡಿಕೆ ಬೆಳೆಗಾರರು ಮತ್ತು ಅವರ ಕುಟುಂಬಗಳ ನೆರವಿಗೆ ಧಾವಿಸುವಂತೆ ಒತ್ತಾಯಿಸಿತಲ್ಲದೇ, ಮಹಾರಾಷ್ಟ್ರದಲ್ಲಿ ತಡೆಹಿಡಲ್ಪಟ್ಟಿರುವ ಅಡಿಕೆ ಸಾಗಣೆ ಸರಕುಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಮತ್ತು ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯವನ್ನು ರಕ್ಷಿಸಲು ಸುವ್ಯವಸ್ಥಿತ ಸಾಗಣೆ ಕಾರ್ಯ ವಿಧಾನವನ್ನು ಜಾರಿಗೊಳಿಸುವಂತೆ ಕೋರಿ ಕ್ಯಾಂಪ್ಕೋ, ಮಾಮ್ಕೋ ಅಲ್ಲದೇ ಕರ್ನಾಟಕ ರಾಜ್ಯ ಅಡಿಕೆ ಮಾರುಕಟ್ಟೆ ಸಹಕಾರ ಸಂಘಗಳ ಒಕ್ಕೂಟದ ಪರವಾಗಿ ಬೇಡಿಕೆ ಮಂಡಿಸಿತು.
ಶಿವಮೊಗ್ಗ ಸಂಸದ ರಾಘವೇಂದ್ರ ಅವರು ದಕ್ಷಿಣ ಭಾರತದ ಅಡಿಕೆ ಬೆಳೆಗಾರರ ಸಹಕಾರಿ ನಿಯೋಗದ ನೇತೃತ್ವ ವಹಿಸಿದ್ದರು. ನಿಯೋಗದಲ್ಲಿ ಮಲ್ನಾಡ್ ಅಡಿಕೆ ಮಾರ್ಕೆಟಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ (ಮಾಮ್ಕೋ), ಸೆಂಟ್ರಲ್ ಅಡಿಕೆ ಮತ್ತು ಕೋಕೋ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೋ), ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ ಮತ್ತು ಕರ್ನಾಟಕ ರಾಜ್ಯ ಅಡಿಕೆ ಮಾರ್ಕೆಟಿಂಗ್ ಕೋ-ಆಪರೇಟಿವ್ ಸೊಸೈಟಿಗಳ ಒಕ್ಕೂಟ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಸೇರಿದ್ದರು.
ಮಹಾರಾಷ್ಟ್ರದಲ್ಲಿ ಉತ್ತಮ ಅಡಿಕೆ ಸಾಗಣೆ ಸರಕುಗಳನ್ನು ದೀರ್ಘಕಾಲ ದವರೆಗೆ ತಡೆಹಿಡಿಯಲಾಗಿರುವುದರಿಂದ ಕರ್ನಾಟಕದಾದ್ಯಂತ ಮತ್ತು ದಕ್ಷಿಣ ಭಾರತದ ವ್ಯಾಪಕ ಅಡಿಕೆ ಬೆಳೆಯುವ ಪ್ರದೇಶಗಳ ಬೆಳೆಗಾರರಿಗೆ ಗಂಭೀರ ತೊಂದರೆ ಉಂಟಾಗಿದೆ ಎಂದು ನಿಯೋಗ ಮುಖ್ಯಮಂತ್ರಿಗಳ ಮಧ್ಯಪ್ರವೇಶವನ್ನು ಕೋರಿತು.
ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಗಳು, ಮಹಾರಾಷ್ಟ್ರದ ವಿವಿಧ ಸಾರಿಗೆ ಕೇಂದ್ರಗಳಲ್ಲಿ, ಉತ್ತರ ಭಾರತದ ಮಾರುಕಟ್ಟೆಗಳಿಗೆ ಹೋಗುವ ಮಾರ್ಗದಲ್ಲಿ ಮಹಾರಾಷ್ಟ್ರದ ಮೂಲಕ ಹಾದು ಹೋಗುತ್ತಿದ್ದ, ಸೂಕ್ತ ದಾಖಲೆ ಹೊಂದಿರುವ, ಸುಮಾರು ೫೦ಕ್ಕೂ ಅಧಿಕ ಅಡಿಕೆ ಸರಕು ಸಾಗಣೆ ಟ್ರಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಿಯೋಗ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ವಿವರಿಸಿತು.
ಸಭೆಯಲ್ಲಿ ನಿಯೋಗದ ಪರವಾಗಿ ಮಾತನಾಡಿದ ಸಂಸದ ರಾಘವೇಂದ್ರ, ಭಾರತದ ಅಡಿಕೆ ಕೃಷಿಯ ಶೇ.೭೦ಕ್ಕಿಂತ ಅಧಿಕ ಪಾಲನ್ನು ಕರ್ನಾಟಕ ಹೊಂದಿದೆ ಮತ್ತು ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ರೈತ ಕುಟುಂಬಗಳ ಜೀವ ನೋಪಾಯವು ಅಡಿಕೆ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿ ಹೇಳಿದರು. ಪ್ರಸಕ್ತ ತಡೆಹಿಡಲ್ಪಟ್ಟಿರುವ ಸರಕು ಗಳು, ಜಿಎಸ್‌ಟಿ ಇನ್‌ವಾಯ್ಸ್‌ಗಳು, ಇ-ವೇ ಬಿಲ್‌ಗಳು ಮತ್ತು ತರ ನೋಂದಣಿಗಳು ಸೇರಿದಂತೆ ಶಾಸನಬದ್ಧ ದಾಖಲೆಗಳನ್ನು ಹೊಂದಿವೆ ಮತ್ತು ಉತ್ತರ ಭಾರತದ ಮಾರುಕಟ್ಟೆಗಳಿಗೆ ಹೋಗುವ ಮಾರ್ಗದಲ್ಲಿ ಮಹಾರಾಷ್ಟ್ರದ ಮೂಲಕ ಕೇವಲ ಹಾದು ಹೋಗುತ್ತವೆ ಎಂದು ಅವರು ವಿವರಿಸಿದರು.
ಇಂತಹ ಸರಕುಗಳನ್ನು ದೀರ್ಘಕಾಲದವರೆಗೆ ತಡೆಹಿಡಿಯುವುದರಿಂದ ಮಾರುಕಟ್ಟೆ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ರೈತರು ಮತ್ತು ಸಹಕಾರಿ ಸಂಸ್ಥೆಗಳ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನುಂಟುಮಾಡುತ್ತದೆ ಎಂದು ನಿಯೋಗ ವಿವರಿಸಿತು.
ಪ್ರಸ್ತುತ ತಡೆಹಿಡಿಯಲ್ಪಟ್ಟಿರುವ ಸರಕು ಸಾಗಣೆ ವಾಹನಗಳನ್ನು ತ್ವರಿತವಾಗಿ ಬಿಡುಗಡೆ ಮಾಡಲು ಮತ್ತು ಮುಂದಿನ ದಿನಗಳಲ್ಲಿ ಮಾನ್ಯತೆ ಪಡೆದ ಸಹಕಾರಿ ಸಂಸ್ಥೆಗಳಿಗೆ ಸೇರಿದ ಸೂಕ್ತ ದಾಖಲೆ ಒಳಗೊಂಡ ಸಾಗಣೆ ಸರಕುಗಳನ್ನು ತಡೆಹಿಡಿಯದಂತೆ ಪಾರದರ್ಶಕ ಮತ್ತು ಕಾಲಬದ್ಧ ಕಾರ್ಯವಿಧಾನವನ್ನು ಸ್ಥಾಪಿಸಲು ನಿಯೋಗ ಮುಖ್ಯಮಂತ್ರಿಗಳನ್ನು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಚನ್ ಬೃಜೇಶ್ ಚೌಟ, ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಮುಂತಾದವರಿದ್ದರು.






