ಮಲ್ಪೆ ಬಂದರು ಸಮಸ್ಯೆ: ಮೀನುಗಾರ ಮುಖಂಡರಿಂದ ಹೋರಾಟದ ಎಚ್ಚರಿಕೆ

ಮಲ್ಪೆ, ಜು.8: ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮೀನುಗಾರ ಸಂಘದ ಪ್ರಮುಖ ಸಭೆ ನಡೆಯಿತು.
ಬಂದರು ನಿರ್ವಹಣೆಯ ಟೆಂಡರ್ ಅವಧಿ ಮುಗಿದಿದ್ದರೂ ಈವರೆಗೆ ಹೊಸ ಟೆಂಡರ್ ಕರೆದಿಲ್ಲ, ಬಂದರಿನ ಸ್ವಚ್ಚತೆ, ಬೀದಿ ದೀಪ ಕೊರತೆ, ಭದ್ರತೆಯ ದೃಷ್ಟಿಯಲ್ಲಿ ಗುಣಮಟ್ಟದ ಸಿಸಿಟಿವಿ ಅಳವಡಿಕೆ ಮಾಡುವಂತೆ ಈ ಹಿಂದೆಯೇ ಸೂಚಿಸಲಾಗಿದ್ದರು ಈವರೆಗೆ ಅಳವಡಿಸಿಲ್ಲ ಎಂದು ಮೀನುಗಾರ ಮುಖಂಡರು ಸಭೆಯಲ್ಲಿ ಆರೋಪಿಸಿದರು.
ಬಂದರು ಇಲಾಖೆಯ ಜಾಗವನ್ನು ಮೀನುಗಾರಿಕಾ ಉದ್ದೇಶಕ್ಕೆ ಮಾತ್ರ ಮಂಜೂರು ಮಾಡಬೇಕೆಂದು ಈ ಹಿಂದೆಯೇ ಸಭೆಯಲ್ಲಿ ನಿರ್ಣಯಿಸ ಲಾಗಿತ್ತು. ಆದರೂ ನಿಯಮ ಮೀರಿ ಟೆಂಡರ್ ಪ್ರಕ್ರಿಯೆ ನಡೆಸದೆ ಇತರ ಉದ್ದೇಶಗಳಿಗೆ ಖಾಸಗಿ ವ್ಯಕ್ತಿಗಳಿಗೆ ನೀಡುತ್ತಿರುವ ಬಗ್ಗೆ ಸಭೆಯಲ್ಲಿ ಮೀನುಗಾರ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಕುರಿತು ಮಾತನಾಡಿದ ಶಾಸಕರು, ಮಲ್ಪೆ ಮೀನುಗಾರಿಕಾ ಬಂದರಿನ ಅವ್ಯವಸ್ಥೆ ಹಾಗೂ ನಿರ್ವಹಣೆಯಲ್ಲಿ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಮೀನುಗಾರರಿಂದ ವ್ಯಾಪಕ ದೂರುಗಳು ಬರುತ್ತಿದ್ದು, ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ಬಂದರು ನಿರ್ವಹಣೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಲ್ಪೆ ಬಂದರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಬಂದರು ಇಲಾಖೆಯ ಮೂಲಕ ನಿರ್ಮಾಣಗೊಳ್ಳಲಿರುವ ನೂತನ ಪ್ರವೇಶ ದ್ವಾರದ ವಿನ್ಯಾಸವನ್ನು ತಕ್ಷಣ ಅಂತಿಮಗೊಳಿಸಿ ಮೀನುಗಾರಿಕಾ ಋತುವಿನ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣ ಗೊಳಿಸಬೇಕು. ಹೆದ್ದಾರಿ ಕಾಮಗಾರಿಗೆ ಈಗಾಗಲೇ ಗುರುತಿಸಿರುವ ಬಂದರು ಇಲಾಖೆಯ ಜಾಗದಲ್ಲಿರುವ ಕಟ್ಟಡಗಳನ್ನು ತಕ್ಷಣ ತೆರವು ಮಾಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅವರು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮೀನುಗಾರಿಕಾ ಇಲಾಖೆಯ ಮೂಲಕ ಬಾಪುಟೋಟದಲ್ಲಿ ನಿರ್ಮಾಣ ಗೊಂಡಿರುವ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಮೀನುಗಾರರ ಉಪಯೋಗಕ್ಕೆ ಇಲ್ಲದಂತಾಗಿದೆ ಎಂದು ಮೀನುಗಾರರು ಸಭೆಯಲ್ಲಿ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮಲ್ಪೆ ಮೀನುಗಾರರ ಸಂಘದ ಸಲಹೆಯಂತೆ ತಕ್ಷಣ ಸ್ಥಳೀಯ ಸಹಕಾರಿ ಸಂಸ್ಥೆಗೆ ನಿರ್ವಹಣೆ ನೀಡಿ ಶೌಚಾಲಯ ಸಾರ್ವಜನಿಕ ಬಳಕೆಗೆ ನೀಡಬೇಕು ಎಂದು ತಿಳಿಸಿದರು.
ತುರ್ತು ಸಂದರ್ಭದಲ್ಲಿ ತಕ್ಷಣ ಸೇವೆಗೆ ಮಲ್ಪೆ ಬಂದರಿನ ಅಗ್ನಿಶಾಮಕ ದಳ ಸನ್ನದ್ಧರಾಗಿರಬೇಕು ಎಂದು ಶಾಸಕರು ತಿಳಿಸಿದರು. ಈಗಾಗಲೇ ಕರಾವಳಿ ಭಾಗದ ಮಲ್ಪೆ, ತೊಟ್ಟಂ ಹಾಗೂ ಗುಜ್ಜರಬೆಟ್ಟು ಭಾಗದ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತಕ್ಷಣ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರದ ಮೀನುಗಾರಿಕಾ ಯೋಜನೆಗಳ ಬಗ್ಗೆ ಮೀನುಗಾರರಿಗೆ ಸಮರ್ಪಕ ಮಾಹಿತಿ ನೀಡಲು ಆದ್ಯತೆ ವಹಿಸುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷ ದಯಾನಂದ ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕುಮಾರ ಸ್ವಾಮಿ, ಇಲಾಖೆಯ ಅಧಿಕಾರಿ ಸವಿತಾ ಖಾದ್ರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಮೀನುಗಾರ ಸಂಘದ ಪದಾಧಿಕಾರಿಗಳು ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.






