ನಶಿಸದ ಪರಂಪರೆ ಯಕ್ಷಗಾನ: ಮೋಹನ್ ಹೆಗಡೆ ಅಭಿಮತ

ಉಡುಪಿ, ಜು.11: ಯಕ್ಷಗಾನ ಎಂದೂ ನಶಿಸದ ಪರಂಪರೆ. ಎಲ್ಲವನ್ನೂ ಸ್ವೀಕರಿಸಿ ತನ್ನತನ ಉಳಿಸಿಕೊಳ್ಳುವುದು ಕಲೆಯ ಮನೋಧರ್ಮ. ಆದರೆ ಸ್ವಾರ್ಥಕ್ಕೆ ಯಾರೂ ಕಲೆ, ಪರಂಪರೆಯನ್ನು ಬಳಸಬಾರದು ಎಂದು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ನ ನಿರ್ದೇಶಕ ಮೋಹನ್ ಭಾಸ್ಕರ ಹೆಗಡೆ ಹೇಳಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಮೂವರು ಹಿರಿಯ ತಾಳಮದ್ದಲೆ ಅರ್ಥಧಾರಿಗಳಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದರು.
ಕರಾವಳಿ ಯಕ್ಷಗಾನದಲ್ಲಿ ತೆಂಕು-ಬಡಗು ಎಂಬ ಎರಡು ಪ್ರಭೇದಗಳಿವೆ. ಇವೆರಡನ್ನೂ ಒಗ್ಗೂಡಿಸಿದ ಅಥವಾ ಮಧ್ಯದಲ್ಲಿ ನಿಂತು ಸರಕಾರವೂ ಮಾಡಲಾಗದ ಕಾರ್ಯವನ್ನು ಯಕ್ಷಗಾನ ಕಲಾರಂಗ ಮಾಡುತ್ತಿದೆ ಎಂದು ಶ್ಲಾಘಿ ಸಿದ ಅವರು, ಕಲಾವಿದರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಿರುವ ಮಾದರಿ ಸಂಸ್ಥೆ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಳಮದ್ದಳೆಯ ಹಿರಿಯ ಅರ್ಥಧಾರಿಗಳಾದ ಸುಳ್ಯದ ವೆಂಕಟರಾಮ ಭಟ್ ಅವರಿಗೆ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಡಾ.ಜಿ.ಕೆ. ಹೆಗಡೆ ಅವರಿಗೆ ಮಟ್ಟು ಮುರಳೀಧರ ರಾವ್ ಪ್ರಶಸ್ತಿ ಹಾಗೂ ಕಾರ್ಕಳದ ಕೋಟೆ ರಾಮ ಭಟ್ ಇವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸ ಲಾಯಿತು.
ಬೆಂಗಳೂರಿನ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ. ಟಿ. ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಹಿರಿಯ ವಿದ್ವಾಂಸ ಡಾ. ತಾಳ್ತಜೆ ವಸಂತಕುಮಾರ್ ಶುಭಾಶಂಸನೆ ಮಾಡಿದರು. ಕುಂಭಾಶಿಯ ಹಿರಿಯ ಸಾಮಾಜಿಕ ಧುರೀಣ ಕೃಷ್ಣಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಸಂಸ್ಥೆಯ ನಾರಾಯಣ ಎಂ. ಹೆಗಡೆ ಪರಿಚಯಿಸಿದರು.
ತಾಳಮದ್ದಲೆ: ಸಭಾ ಕಾರ್ಯಕ್ರಮಕ್ಕೂ ಮೊದಲು ಖ್ಯಾತ ಕಲಾವಿದರ ಒಗ್ಗೂಡುವಿಕೆಯಲ್ಲಿ ಶ್ರೀರಂಗ ತುಲಾಭಾರ’ ತಾಳಮದ್ದಳೆ ಪ್ರದರ್ಶನ ಗೊಂಡಿತು. ಹಿಮ್ಮೇಳನದಲ್ಲಿ ಕಾವ್ಯಶ್ರೀ ಅಜೇರು, ಕೃಷ್ಣಪ್ರಕಾಶ ಉಳಿತ್ತಾಯ, ಚಂದ್ರ ಶೇಖರ ಆಚಾರ್ಯ ಹಾಗೂ ಅರ್ಥಧಾರಿಗಳಾಗಿ ವಾಸುದೇವ ರಂಗ ಭಟ್, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್‌ಕೆರೆ, ಡಾ.ಪ್ರದೀಪ್ ವಿ. ಸಾಮಗ ಪಾಲ್ಗೊಂಡಿದ್ದರು.






