ವಿಶೇಷ ಪೌಷ್ಠಿಕ ಆಹಾರ ಯೋಜನೆ ಹಸ್ಲರಿಗೂ ವಿಸ್ತರಿಸಲು ಆಗ್ರಹ: ಉಡುಪಿ ಡಿಸಿ ಕಚೇರಿ ಎದುರು ಧರಣಿ

ಉಡುಪಿ, ಜು.13: ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಹಿಂದುಳಿದ ಬುಡಕಟ್ಟು ಜನಾಂಗವಾದ ಹಸಲ/ಹಸ್ಲ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಂತೆ, ಉಡುಪಿ ಜಿಲ್ಲೆಯ ಹಸಲ ಸಮುದಾಯಕ್ಕೂ ಪೌಷ್ಟಿಕ ಆಹಾರ ಯೋಜನೆ ಯನ್ನು ವಿಸ್ತರಿಸುವಂತೆ ಹಾಗೂ ಅರಣ್ಯ ಹಕ್ಕುಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮುನ್ವಯ ಸಮಿತಿಯ ನೇತೃತ್ವದಲ್ಲಿ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಧರಣಿಯ ಬಳಿಕ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ನಿಯೋಗವು ಉಡುಪಿ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ, ಜಿಲ್ಲೆಯ ಹಸಲ (ಹಸಲರು) ಸಮುದಾಯದ ಹಕ್ಕುಗಳಿಗೆ ಸಂಬಂಧಿಸಿದಂತೆ ವಿವರವಾದ ಮನವಿಯನ್ನು ಸಲ್ಲಿಸಿತು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ವಿಷಯದ ಗಂಭೀರತೆಯನ್ನು ಅರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ಈ ವೇಳೆ ಉಡುಪಿ ಜಿಲ್ಲೆಯ ಹಸಲ ಸಮುದಾಯದ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸುವ ಸಂಬಂಧ ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಐಟಿಡಿಪಿ ಇಲಾಖೆಯ ಮೂಲಕ ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಶಿಫಾರಸು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯೋಗವು ಹಸಲ ಸಮುದಾಯವು ಉಡುಪಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಎಂದು ಗುರುತಿಸಲ್ಪಟ್ಟಿದ್ದರೆ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅದೇ ಸಮುದಾಯವನ್ನು ಪರಿಶಿಷ್ಟ ಪಂಗಡ ಎಂದು ಗುರುತಿಸಿ ರುವುದರಿಂದ ಸಮುದಾಯವು ಹಲವು ಸಾಂವಿಧಾನಿಕ ಹಕ್ಕುಗಳು ಹಾಗೂ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾ ಗಿರುವ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿತು.
ಜಿಲ್ಲೆ ಬದಲಾದರೆ ಜಾತಿ ಬದಲಾಗಬಾರದು; ಹಸಲ ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂಬ ಆಗ್ರಹದೊಂದಿಗೆ ಸಮಿತಿಯು ತನ್ನ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದೆ.






